ಬೆಂಗಳೂರು: ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಹೊರ ರಾಜ್ಯದ ಆರೋಪಿಯನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕದಿರಿಯ ರವಿನಾಯಕ್ (42) ಬಂಧಿತ ಆರೋಪಿ. ಬಂಧಿತನಿಂದ ₹ 30 ಲಕ್ಷ ಮೌಲ್ಯದ 40 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮಾರುತಿ ನಗರದ ನಿವಾಸಿಯೊಬ್ಬರು, ಏಪ್ರಿಲ್ 6ರಂದು ಮನೆಯ ಎದುರು ದ್ವಿಚಕ್ರ ವಾಹನವನ್ನು ನಿಲುಗಡೆ ಮಾಡಿದ್ದರು. ಹತ್ತು ನಿಮಿಷದ ನಂತರ ಬಂದು ನೋಡಿದಾಗ ಸ್ಥಳದಲ್ಲಿ ವಾಹನ ಇರಲಿಲ್ಲ. ಮಾಲೀಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಾಗಲೂರು ಕ್ರಾಸ್ ಬಳಿ ಬಂಧಿಸಲಾಯಿತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ಆರೋಪಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ವಾಹನಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ. ಆಂಧ್ರಪ್ರದೇಶದ ವಿವಿಧೆಡೆ ಆರೋಪಿ ನಿಲುಗಡೆ ಮಾಡಿದ್ದ 27 ವಾಹನಗಳೂ ಸೇರಿದಂತೆ 40 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿಯ ಬಂಧನದಿಂದ ಯಲಹಂಕ, ಸಂಪಿಗೆಹಳ್ಳಿ, ಕೊಡಿಗೇಹಳ್ಳಿ, ಅಮೃತಹಳ್ಳಿ, ಅವಲಹಳ್ಳಿ, ಚಿಕ್ಕಬಳ್ಳಾಪುರ, ಹೊಸಕೋಟೆ, ಹೆಬ್ಬಾಳ, ನಂದಿಗಿರಿ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.
ವ್ಯಕ್ತಿ ಅಡ್ಡಗಟ್ಟಿ ಚಿನ್ನಾಭರಣ ಸುಲಿಗೆ
ಬೆಂಗಳೂರು: ಚಿನ್ನಾಭರಣ ಸುಲಿಗೆ ಮಾಡಿದ್ದ ನಾಲ್ವರು ಬಾಲಕರನ್ನು ಕೆ.ಆರ್. ಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲಕರನ್ನು ಪೋಷಕರ ವಶಕ್ಕೆ ಬಿಟ್ಟಿದ್ದಾರೆ. ಬಾಲಕರಿಂದ 472 ಗ್ರಾಂ ಚಿನ್ನಾಭರಣ ಒಂದು ಮೊಬೈಲ್ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ‘ಠಾಣಾ ವ್ಯಾಪ್ತಿಯ ಪ್ರಶಾಂತ್‌ನಗರ ಲೇಔಟ್‌ನಲ್ಲಿ ನೆಲಸಿರುವ ದೂರುದಾರರು ಆಂಧ್ರಪ್ರದೇಶಕ್ಕೆ ಹೋಗಿದ್ದರು. ಜುಲೈ 3ರಂದು ನಗರಕ್ಕೆ ವಾಪಸ್ ಬಂದು ಕೆ.ಆರ್. ಪುರದ ಗಾರ್ಡನ್ ಸಿಟಿ ಕಾಲೇಜು ಬಳಿ ಒಬ್ಬರೇ ನಡೆದು ತೆರಳುತ್ತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರು ಚಿನ್ನಾಭರಣ ಹಾಗೂ ಮೊಬೈಲ್ ಅನ್ನು ಸುಲಿಗೆ ಮಾಡಿಕೊಂಡು ಪರಾರಿ ಆಗಿದ್ದರು. ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಬಾಲಕರು ಕೃತ್ಯ ಎಸಗುತ್ತಿರುವುದು ಪತ್ತೆಯಾಗಿತ್ತು’ ಎಂದು ಪೊಲೀಸರು ಹೇಳಿದರು. ‘ಬಾಲಕರ ಪೋಷಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ವಿಚಾರಣೆಗೆ ಬಂದ ಪೋಷಕರು ಚಿನ್ನಾಭರಣವನ್ನು ಒಪ್ಪಿಸಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.