ಬೆಂಗಳೂರು: ‘ಅರ್ಕಾವತಿ ನದಿ ಪುನಶ್ಚೇತನ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂಬಂಧ ತಜ್ಞರ ಸಮಿತಿ ರಚನೆ ಜೊತೆಗೆ ಸಾರ್ವಜನಿಕ, ಖಾಸಗಿ(ಪಿಪಿಪಿ) ಸಹಭಾಗಿತ್ವದಡಿ ನದಿ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ’ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನದಿ ಪುನಶ್ಚೇತನ ಪಾಲುದಾರರೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
‘ನಂದಿ ಬೆಟ್ಟದಿಂದ ತಿಪ್ಪಗೊಂಡನಹಳ್ಳಿ(ಟಿ.ಜಿ.ಹಳ್ಳಿ)ವರೆಗೆ 53 ಕಿ.ಮೀ ಉದ್ದ, 1400 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಅರ್ಕಾವತಿ ನದಿಯ ಪಾತ್ರವಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ಕಾರದ ಹಲವಾರು ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತಿತರರ ಪಾಲುದಾರರೊಂದಿಗೆ ಜೊತೆಗೂಡಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ’ ಎಂದು ವಿವರಿಸಿದರು.
‘ಎತ್ತಿನಹೊಳೆಯಿಂದ ಟಿ.ಜಿಹಳ್ಳಿ ಜಲಾಶಯಕ್ಕೆ ನೀರು ಬಂದಿದ್ದರೆ ಎರಡೂ ನದಿಗಳ ನೀರನ್ನು ಮಿಶ್ರ ಮಾಡಿ ಪೂರೈಸುವ ಉದ್ದೇಶವಿತ್ತು. ಬೆಂಗಳೂರು ನಗರದಲ್ಲಿ ಉಂಟಾದ ಕೈಗಾರಿಕಾ ಬೆಳವಣಿಗೆ, ಕೈಗಾರಿಕಾ ತ್ಯಾಜ್ಯ, ಪರಿಸರ ಮಾಲೀನ್ಯ, ಒಳಚರಂಡಿಯಂತಹ ಗಂಭೀರ ಸಮಸ್ಯೆಯಿಂದ ಟಿ.ಜಿ.ಹಳ್ಳಿ ಜಲಾಶಯದ ನೀರು ಮಲಿನಗೊಂಡಿದ್ದು, ಕುಡಿಯಲು ಯೋಗ್ಯವಿಲ್ಲ. ಹೀಗಾಗಿ ಪುನಶ್ಚೇತನ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.
‘ಐಡೆಕ್ ಸಂಸ್ಥೆ, ಈಗಾಗಲೇ ಹೆಸರಘಟ್ಟ, ಮಾದನಾಯಕನ ಹಳ್ಳಿ, ಬಿಬಿಎಂಪಿ ಪ್ರದೇಶದ ನದಿ ತಟದಲ್ಲಿ ಸಮಗ್ರ ಅಧ್ಯಯನ ನಡೆಸಿದ್ದು, ಪುನಶ್ಚೇತನಕ್ಕಾಗಿ ವರದಿ ಸಿದ್ಧಪಡಿಸುತ್ತಿದೆ. ಪಿಪಿಪಿ ಮಾದರಿಯಲ್ಲಿ ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ’ ಎಂದು ವಿವರಿಸಿದರು.
‘ನದಿ ಪಾತ್ರದಲ್ಲಿ ಜಲಮಂಡಳಿಯ ವ್ಯಾಪ್ತಿ ಪ್ರದೇಶ ಶೇ 15ರಷ್ಟು ಇದೆ. ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಸಹ ಅಧ್ಯಯನ ಮಾಡಿವೆ. ಎಲ್ಲರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಪುನಶ್ಚೇತನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು’ ಅವರು ತಿಳಿಸಿದರು.
ಸಭೆಯಲ್ಲಿ ಜಲಮಂಡಳಿಯ ಮುಖ್ಯ ಎಂಜಿನಿಯರ್, ಮೂಲಸೌಕರ್ಯ ಅಭಿವೃದ್ದಿ ನಿಗಮದ ಸಲಹೆಗಾರರು, ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಉನ್ನತ ಅಧಿಕಾರಿಗಳು, ಡಿಎಂಎ, ಕೆಐಎಡಿಬಿ, ಕೆಎಸ್‌ಪಿಸಿಬಿ, ಬಿಡಿಎ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ, ದೊಡ್ಡಬಳ್ಳಾಪುರ, ಮಾದನಾಯಕನಹಳ್ಳಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪಾನಿ ಅರ್ಥ್, ಬಯೋಮ್ ಟ್ರಸ್ಟ್, ಆರ್ಟ್ ಆಫ್ ಲಿವಿಂಗ್, ಐಐಎಸ್ಸಿ ವಿಜ್ಞಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.