
ಬೆಂಗಳೂರು: ಅರ್ಕಾವತಿ ಬಡಾವಣೆಯ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರವೇ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನ ಸಭೆಯಲ್ಲಿ ಭರವಸೆ ನೀಡಿದರು.
ಬಿಜೆಪಿಯ ಎಸ್.ಮುನಿರಾಜು ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ‘ಭೂಸಂತ್ರಸ್ತ ರೈತರಿಗೆ ಪರಿಹಾರವಾಗಿ ಭೂಮಿ ನೀಡಬೇಕು ಎಂಬುದಕ್ಕೆ ನಾನು ಬದ್ಧವಾಗಿದ್ದೇನೆ’ ಎಂದರು.
‘ಅರ್ಕಾವತಿ ಬಡಾವಣೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲೇ ಆರಂಭವಾಯಿತು. ಈ ಮಧ್ಯೆ ನಿವೇಶನಕ್ಕೆ ಅನೇಕರು ಅರ್ಜಿ ಹಾಕಿಕೊಂಡು ಅವರಿಗೆ ನಿವೇಶನ ಮಂಜೂರಾಯಿತು. ಭೂಸಂತ್ರಸ್ತರಿಗೆ ಅದೇ ಜಾಗದಲ್ಲಿ ಪರಿಹಾರವಾಗಿ ಜಾಗ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ, ಮುಂದೆ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸಲು ನ್ಯಾಯಮೂರ್ತಿ ಕೇಶವ ನಾರಾಯಣ ಸಮಿತಿಯನ್ನು ನೇಮಿಸಲಾಗಿದೆ. ಸಮಿತಿಯವರನ್ನು ಕರೆದು ಆದಷ್ಟು ಬೇಗ ತೀರ್ಮಾನ ಮಾಡುವಂತೆ ಮನವಿ ಮಾಡಲಾಗುವುದು’ ಎಂದು ಅವರು ಹೇಳಿದರು.
ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲೂ ನ್ಯಾಯಾಲಯ ಹೊಸ ಅರ್ಜಿ ತೆಗೆದುಕೊಳ್ಳಲು ಅವಕಾಶ ನೀಡಿಲ್ಲ. ಹೀಗಾಗಿ ಇಲ್ಲಿ ಮೊದಲು ಭೂಸಂತ್ರಸ್ತರಿಗೆ ಭೂಮಿ ನೀಡಲಾಗುತ್ತಿದ್ದು, ಅರ್ಕಾವತಿ ಬಡಾವಣೆ ಭೂಸಂತ್ರಸ್ತರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.