ADVERTISEMENT

ಅಸ್ಸಾಂನಲ್ಲಿ ಪ್ರವಾಹ ಇಲ್ಲಿಂದ ಪರಿಹಾರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:45 IST
Last Updated 31 ಜುಲೈ 2019, 19:45 IST
ಅಸ್ಸಾಂ ಪ್ರವಾಹ ಸಂತ್ರಸ್ತರಿಗಾಗಿ ವಾರಾಂತ್ಯದಲ್ಲಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಅಸ್ಸಾಂ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು
ಅಸ್ಸಾಂ ಪ್ರವಾಹ ಸಂತ್ರಸ್ತರಿಗಾಗಿ ವಾರಾಂತ್ಯದಲ್ಲಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಅಸ್ಸಾಂ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು   

ಪ್ರವಾಹದಿಂದ ತತ್ತರಿಸಿರುವ ತಮ್ಮವರಿಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಅಸ್ಸಾಂ ಜನರ ಹೃದಯ ಮಿಡಿದಿದೆ. ಬೆಂಗಳೂರಿನಲ್ಲಿರುವ ಅಸ್ಸಾಂ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿರುವ ಉದ್ಯೋಗಿಗಳು ವಾರಾಂತ್ಯದಲ್ಲಿ ನಗರದ ವಿವಿಧೆಡೆ ಪ್ರವಾಹ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿ ಕಳುಸುತ್ತಿದ್ದಾರೆ.

ಬೆಂಗಳೂರಿಗರು ಕೂಡ ಅಷ್ಟೇ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ₹3 ಲಕ್ಷ ಹಣ ಸಂಗ್ರಹವಾಗಿದೆ. ಕೆಲವು ಸಂಘ, ಸಂಸ್ಥೆಗಳು ಔಷಧ, ದಿನಬಳಕೆ ವಸ್ತು, ಬಟ್ಟೆ, ಹೊದಿಕೆಗಳನ್ನು ನೀಡಿವೆ ಎಂದು ಅಸ್ಸಾಂ ಸೊಸೈಟಿ ಆಫ್‌ ಬೆಂಗಳೂರು ಸಂಘಟನೆಯ ಅಧ್ಯಕ್ಷಸುಮೇರು ಕತಕಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನೆಲೆಸಿರುವ ಅಸ್ಸಾಂ ರಾಜ್ಯದ17 ಸಾವಿರ ಜನರು ‘ಅಸ್ಸಾಂ ಸೊಸೈಟಿ ಆಫ್‌ ಬೆಂಗಳೂರು’ ಸಂಘಟನೆಯ ನೇತೃತ್ವದಲ್ಲಿ ಶನಿವಾರ, ಭಾನುವಾರ ನಗರದ ವಿವಿಧ ರಸ್ತೆ, ಮಾಲ್‌ಗಳ ಎದುರು ನಿಂತು ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ADVERTISEMENT

‘ಅಲ್ಲಿ ನಮ್ಮವರು ಅನ್ನ, ನೀರಿಲ್ಲದೆ ಪರದಾಡುತ್ತಿದ್ದಾರೆ. ಅವರ ಸ್ಥಿತಿ ನೆನಪಿಸಿಕೊಂಡರೆ ಕಣ್ಣೀರು ಬರುತ್ತದೆ. ಮನಸ್ಸು ಭಾರವಾಗುತ್ತದೆ. ಹೀಗಿರುವಾಗ ನಾವ್ಯಾರೂ ವಾರಾಂತ್ಯಗಳನ್ನು ಮೋಜು, ಮಸ್ತಿಗಾಗಿ ಪೋಲು ಮಾಡುತ್ತಿಲ್ಲ. ನೋವುಂಡ ನಮ್ಮವರಿಗಾಗಿ ಅಳಿಲು ಸೇವೆ ಸಲ್ಲಿಸಲು ರಜೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸ್ವಯಂ ಸೇವಕರು ಹೇಳಿದರು.

‘ಸಂಗ್ರಹವಾದ ಹಣ ಮತ್ತು ವಸ್ತುಗಳನ್ನು ಅಸ್ಸಾಂ ಸರ್ಕಾರದ ಪ್ರವಾಹ ಸಂತ್ರಸ್ತರ ನಿಧಿಗೆ ಕಳಿಸುತ್ತಿಲ್ಲ, ಬದಲಾಗಿ ನಾವೇ ಖುದ್ದಾಗಿ ಅಸ್ಸಾಂಗೆ ತೆರಳಿ ಸಂತ್ರಸ್ತರಿಗೆ ಹಸ್ತಾಂತರಿಸುತ್ತೇವೆ. ಬಟ್ಟೆ, ಹೊದಿಕೆ, ಔಷಧಿಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುತ್ತೇವೆ’ ಎಂದು ವೃತ್ತಿಯಲ್ಲಿ ಸಾಫ್ಟವೇರ್‌ ಉದ್ಯೋಗಿಯಾಗಿರುವ ಸುಮೇರು ಮಾಹಿತಿ ನೀಡಿದರು.

‘ಅಸ್ಸಾಂಗೆ ಪ್ರವಾಹ ಹೊಸದಲ್ಲ. ಈಶಾನ್ಯ ಭಾಗದಲ್ಲಿರುವ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ದೇಶದ ಇತರ ಭಾಗಗಳ ಜನರ ಗಮನ ಸೆಳೆಯುತ್ತಿಲ್ಲ’ ಎಂದು ಅವರು ನೋವು ತೋಡಿಕೊಂಡರು. ಬೆಂಗಳೂರು ಜನರು ನಮ್ಮ ನೋವುಗಳಿಗೆ ಸ್ಪಂದಿಸಿದ್ದಾರೆ. ಉದಾರ ಮನಸ್ಸಿನಿಂದ ದೇಣಿಗೆ ನೀಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.