ಬೆಂಗಳೂರು: ಜೀವನ್‌ಬಿಮಾ ನಗರದ ತಿಪ್ಪಸಂದ್ರದಲ್ಲಿ ಒತ್ತುವರಿ ಜಾಗ ತೆರವುಗೊಳಿಸಲು ಹೋಗಿದ್ದ ಬಿಡಿಎ ಟಾಸ್ಕ್‌ಫೋರ್ಸ್ ಇನ್‌ಸ್ಪೆಕ್ಟರ್ ರಾಜೇಶ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹಾಲಿಂಗೇಗೌಡ ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಆ ಸಂಬಂಧ ಸಂತೋಷ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣ ಭವನ್ ಹೋಟೆಲ್ ಪಕ್ಕದಲ್ಲಿದ್ದ ಬಿಡಿಎ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸಲು ಅಧಿಕಾರಿಗಳು ತೆರಳಿದ್ದಾಗ ಈ ಘಟನೆ ನಡೆದಿದೆ.
‘ಜಾಗದ ವ್ಯಾಜ್ಯ ನ್ಯಾಯಾಲಯದಲ್ಲಿದೆ. ನೋಟಿಸ್ ನೀಡದೇ ತೆರವು ಮಾಡಲು ಬಂದಿರುವುದು ಸರಿಯಲ್ಲ’ ಎಂದು ಕೆಲವರು ಜಗಳ ತೆಗೆದಿದ್ದರು. ತಮ್ಮ ಬಳಿ ಸೂಕ್ತ ದಾಖಲೆಗಳಿರುವುದಾಗಿ ಹೇಳಿದ್ದ ಬಿಡಿಎ ಅಧಿಕಾರಿಗಳು, ತೆರವು ಕಾರ್ಯಾಚರಣೆ ಮುಂದುವರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಅಧಿಕಾರಿಗಳ ವಿರುದ್ಧವೇ ಹರಿಹಾಯ್ದಿದ್ದ ಸಂತೋಷ್ ಶೆಟ್ಟಿ ಹಾಗೂ ಇತರರು, ರಾಜೇಶ್ ಹಾಗೂ ಮಹಾಲಿಂಗೇಗೌಡ ಅವರ ಮೇಲೆ ಹಲ್ಲೆ ಮಾಡಿದ್ದರು. ಸ್ಥಳದಲ್ಲಿದ್ದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು’ ಎಂದರು.
‘ಅಧಿಕಾರಿಗಳಿಬ್ಬರು ಚಿಕಿತ್ಸೆ ಪಡೆದುಕೊಂಡಿದ್ದು, ಅವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಒಬ್ಬಾತ, ಆಸ್ಪತ್ರೆಗೆ ದಾಖಲಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.