ADVERTISEMENT

‘ಶಾಸ್ತ್ರ’ ಹೇಳಿ ₹30 ಲಕ್ಷ ವಂಚಿಸಿದ ಜ್ಯೋತಿಷಿ

‘ಜನ್ಮ ಜನ್ಮಾಂತರ ಬಂಧ’ ಎಂದು ಯುವತಿ ನಂಬಿಸಿದ್ದವನ ಸೆರೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:30 IST
Last Updated 21 ಆಗಸ್ಟ್ 2019, 19:30 IST

ಬೆಂಗಳೂರು: ‘ಕಳೆದುಹೋದ ಜನ್ಮದಲ್ಲಿ ನೀನು ನನ್ನ ಪತ್ನಿ ಆಗಿದ್ದೆ’ ಎಂದು ಚಾರ್ಟೆಂಡ್ ಅಕೌಂಟೆಂಡ್‌ ಯುವತಿಯೊಬ್ಬಳನ್ನು ನಂಬಿಸಿ ಆಕೆಯಿಂದ ₹30 ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದ ಜ್ಯೋತಿಷಿಯೊಬ್ಬನಿಗೆ ಚೆನ್ನಾಗಿ ಥಳಿಸಿದ ಮಹಿಳಾ ಸಂಘಟನೆಗಳ ಸದಸ್ಯೆಯರು, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವೆಂಕಟ ಕೃಷ್ಣಾಚಾರ್ಯ (28) ಬಂಧಿತ ಆರೋಪಿ. ಶ್ರೀನಿವಾಸ ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯ ಒಂದರಲ್ಲಿ ವಾಸವಿರುವ ಈತ, ಕೆಲವು ವರ್ಷಗಳಿಂದ ಜ್ಯೋತಿಷ, ವಾಸ್ತು ಹೆಸರಲ್ಲಿ ಜನರನ್ನು ನಂಬಿಸುತ್ತಿದ್ದ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ವಿಜಯನಗರದಲ್ಲಿರುವ ಯುವತಿಯ ಮನೆಗೆ ವಾಸ್ತು ನೋಡಲು ತೆರಳಿದ್ದ ಈತ, ‘ಮನೆಯ ವಾಸ್ತು ಸರಿ ಇಲ್ಲ. ಹೀಗಾಗಿ ಮನೆಯಲ್ಲಿ ಯಾವುದೇ ಶುಭಕಾರ್ಯ ಆಗುವುದಿಲ್ಲ’ ಎಂದು ನಂಬಿಸಿದ್ದನಂತೆ. ಜ್ಯೋತಿಷಿಯ ಮಾತು ನಂಬಿದ್ದ ಯುವತಿ, ಎರಡು ವರ್ಷಗಳಿಂದ ಸುಮಾರು 12 ಬಾರಿ‌ ತನ್ನ ಮನೆಯಲ್ಲಿ ಯಾಗಗಳನ್ನು ಮಾಡಿ‌ಸಿದ್ದಳಂತೆ. ಬಳಿಕ ‘ನನಗೂ ನಿಮಗೂ ಜನ್ಮ ಜನ್ಮಾಂತರ ಅನುಬಂಧವಿದೆ’ ಎಂದು ಕತೆ ಕಟ್ಟಿ ಆಕೆಯ ನಂಬರ್ ಪಡೆದಿದ್ದನಂತೆ.

ADVERTISEMENT

ಆರೋಪಿಯು ತನ್ನ ವಸತಿ ಸಮುಚ್ಚಯಕ್ಕೆ ಯುವತಿಯನ್ನು ಕರೆಸಿಕೊಂಡು ಹಲವು ಬಾರಿ ಮಂತ್ರ ಪಠಣ ನಡೆಸಿದ್ದ.

ಈಗಾಗಲೇ ಜ್ಯೋತಿಷಿಗೆ ವಿವಾಹವಾಗಿ ಮಗು ಇದ್ದರೂ, ‘ಕಳೆದ ಮೂರು ಜನ್ಮದಿಂದ ನಾವಿಬ್ಬರೂ ಗಂಡ-ಹೆಂಡತಿ. ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ಹಿಂದಿನ ಜನ್ಮದಲ್ಲಿ ನೀನು ಭರತನಾಟ್ಯದ ದೊಡ್ಡ ಕಲಾವಿದೆಯಾಗಿದ್ದೆ. ನಿನ್ನ ಸಾವಿಗೆ ಹಿಂದಿನ ಜನ್ಮದಲ್ಲಿ ನಾನೇ ಕಾರಣನಾಗಿದ್ದೆ. ನನ್ನನ್ನು ಮದುವೆ ಆದಾಗ ಮಾತ್ರ ನಿನಗೆ ಮೋಕ್ಷ ಸಾಧ್ಯ’ ಎಂದೂ ನಂಬಿಸಿದ್ದನಂತೆ.

ಆತನ ಮಾತನ್ನು ನಂಬಿದ ಯುವತಿ, ಜ್ಯೋತಿಷಿ ಹೇಳಿದಂತೆ ತನ್ನ ಬ್ಯಾಗ್‌ನಲ್ಲಿ ನಿಂಬೆ, ತಾಯತ, ಹೆಣ್ಣಿನ ಗೊಂಬೆ, ಕರ್ಪೂರ ಇಟ್ಟುಕೊಂಡು ಕಚೇರಿಗೆ ತೆರಳುತ್ತಿದ್ದಳು ಎಂದೂ ಹೇಳಲಾಗಿದೆ. ಅಷ್ಟೇ ಅಲ್ಲ, ಆತನನ್ನು ಅತಿಯಾಗಿ ನಂಬಿದ್ದ ಯುವತಿ, ಕೇಳಿದಾಗಲೆಲ್ಲ ಹಣ ನೀಡುತ್ತಿದ್ದಳು. ಎರಡು ವರ್ಷದಲ್ಲಿ ಹಂತ ಹಂತವಾಗಿ ಜ್ಯೋತಿಷಿಗೆ ₹ 30 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಳು. ಆಕೆಯ ಹೆಸರಿನಲ್ಲಿ ಬ್ಯಾಂಕ್‍ಗಳಿಂದ ಸಾಲ ಕೂಡಾ ಪಡೆದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ವಿಷಯ ಯುವತಿಯ ಪೋಷಕರ ಗಮನಕ್ಕೆ ಬಂದಿದೆ. ಅವರು ಮಹಿಳಾ ಸಂಘಟನೆ ಸದಸ್ಯರ ಜತೆ ಜ್ಯೋತಿಷಿ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದಾಗ ಆತ ಬೆದರಿಕೆ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಜ್ಯೋತಿಷಿಯನ್ನು ಥಳಿಸಿದ್ದಾರೆ. ಯುವತಿಯ ಪೋಷಕರು, ಮಗಳು ವಂಚನೆಗೊಳಗಾದ ಬಗ್ಗೆ ಹನುಮಂತನಗರ ಪೊಲೀಸರಿಗೆ ಮಾಹಿತಿಯನ್ನೂ ನೀಡಿದ್ದಾರೆ.

ಯುವತಿಗೆ ಕೌನ್ಸೆಲಿಂಗ್?

ಜ್ಯೋತಿಷಿಯ ಮೋಸದಾಟಕ್ಕೆ ಆತನ ಪತ್ನಿ ಕೂಡಾ ಕೈಜೋಡಿಸಿದ್ದಳು ಎನ್ನಲಾಗಿದೆ. ಜ್ಯೋತಿಷಿ ಮಾತಿಗೆ ಮರುಳಾಗಿ ಆತನನ್ನೇ ಮದುವೆ ಆಗುವುದಾಗಿ ಯುವತಿ ಪಟ್ಟುಹಿಡಿದಿದ್ದು, ಆಕೆಗೆ ಪಾಲಕರು ಈಗ ಕೌನ್ಸೆಲಿಂಗ್‌ಗೆ (ಆಪ್ತ ಸಮಾಲೋಚನೆ) ಕರೆದುಕೊಂಡು ಹೋಗುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.