ADVERTISEMENT

ಅಟಲ್‌ ಜತೆಗೇ ಮರೆಯಾದ ಸಾರಿಗೆ

ಬಡ ಪ್ರಯಾಣಿಕರಿಗೆ ಇಂದಿರಾ ಬಸ್‌ ಬರಲಿಲ್ಲ, ಹಳೆಯದೂ ಉಳಿಯಲಿಲ್ಲ,

ಶರತ್‌ ಹೆಗ್ಡೆ
Published 8 ಅಕ್ಟೋಬರ್ 2018, 20:15 IST
Last Updated 8 ಅಕ್ಟೋಬರ್ 2018, 20:15 IST
ಅಟಲ್‌ ಸಾರಿಗೆ ಬಸ್‌
ಅಟಲ್‌ ಸಾರಿಗೆ ಬಸ್‌   

ಬೆಂಗಳೂರು: ಬಡ, ಕೂಲಿ ಕಾರ್ಮಿಕರಿಗೆ, ಕೊಳೆಗೇರಿ ನಿವಾಸಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರಿನಲ್ಲಿ ಬಿಎಂಟಿಸಿ ಆರಂಭಿಸಿದ್ದ ‘ಅಟಲ್‌ ಸಾರಿಗೆ’, ಅವರ ನಿಧನದೊಂದಿಗೇ ನೇಪಥ್ಯಕ್ಕೆ ಸರಿದಿದೆಯೇ?

‘ಹೌದು’ ಎನ್ನುತ್ತಾರೆ ಈ ಬಸ್‌ಗಳಲ್ಲಿ ನಿತ್ಯ ಓಡಾಡುತ್ತಿದ್ದ ಪ್ರಯಾಣಿಕರು.

ಅಟಲ್‌ ಸಾರಿಗೆ ಸೇವೆಯನ್ನು2009ರಲ್ಲಿ ಬಿಎಂಟಿಸಿ 25 ಬಸ್‌ಗಳೊಂದಿಗೆ ಆರಂಭಿಸಿತ್ತು. 2011ರಲ್ಲಿ ಈ ಸೇವೆಯ ಬಸ್‌ಗಳ ಸಂಖ್ಯೆಯನ್ನು 32ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಕ್ರಮೇಣ ಹಿನ್ನಡೆ ಕಂಡ ಈ ಸೇವೆ ಸದ್ದಿಲ್ಲದೇ ಸ್ಥಗಿತಗೊಂಡಿದೆ.

ADVERTISEMENT

’ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಆರಂಭವಾದ ಈ ಸೇವೆ ಅವರ ನಿಧನದ ನಂತರ ಮರೆಯಾಗುತ್ತಿದೆ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಬಿಎಂಟಿಸಿ ಅಧಿಕಾರಿಗಳು ಮಾತ್ರ ಈ ಸೇವೆ ಮುಂದುವರಿದಿದೆ ಎಂದೇ ಹೇಳುತ್ತಿದ್ದಾರೆ. ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ‘ಅಟಲ್‌ ಸಾರಿಗೆ ಕಾರ್ಯಾಚರಣೆ ನಿಲ್ಲಿಸಿಲ್ಲ. ಬಸ್‌ಗಳು ಹಳೆಯದಾದಾಗ ಆ ಜಾಗಕ್ಕೆ ಹೊಸ ಬಸ್‌ಗಳನ್ನು ಖರೀದಿಸಿಲ್ಲ’.

‘ಈ ಸಾರಿಗೆಗೆ ವಿಶೇಷ ವಿನ್ಯಾಸದ ಬಸ್‌ಗಳಿವೆ. ಮತ್ತೆ ಹೊಸ ಬಸ್‌ಗಳನ್ನು ಹಾಕಿದರೂ ಅದೇ ವಿನ್ಯಾಸ ಮಾಡಬೇಕಾಗುತ್ತದೆ. ಸದ್ಯ ಇಂಧನ ದರ ಮತ್ತು ನಿರ್ವಹಣಾ ವೆಚ್ಚದ ಏರಿಕೆಯಿಂದಾಗಿ ಹೊಸ ಬಸ್‌ಗಳನ್ನು ಈ ಸೇವೆಗೆ ಬಳಸಿಲ್ಲ. ಸೀಮಿತ ಮಾರ್ಗಗಳಲ್ಲಿ ಮಾತ್ರ ಈ ಬಸ್‌ಗಳು ಓಡಾಡುತ್ತಿವೆ’ ಎಂದು ಹೇಳುತ್ತಾರೆ.

ಶಾಸಕ ಆರ್‌. ಅಶೋಕ (ಅವರು ಸಾರಿಗೆ ಸಚಿವರಾಗಿದ್ದಾಗ ಆರಂಭಿಸಿದ್ದ ಸೇವೆ ಇದು) ಅವರುಸೆ. 18ರಂದು ನಡೆದ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ‘ಅಟಲ್‌ ಸಾರಿಗೆಯನ್ನು ಪುನಶ್ಚೇತನಗೊಳಿಸಬೇಕು’ ಎಂದು ಒತ್ತಾಯಿಸಿದ್ದರು.

ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ಇತರ ಬಸ್‌ಗಳ ಬಗ್ಗೆ ವಿವರವಾದ ಮಾಹಿತಿ ಸಿಗುತ್ತದೆ. ಆದರೆ, ಅಟಲ್‌ ಸಾರಿಗೆ ಬಗ್ಗೆ ‘ಸಮಾಜದ ದುರ್ಬಲ ವರ್ಗದ ಜನತೆಯ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ದರಗಳಲ್ಲಿ ನೇರ ಸಾರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಸರ್ಕಾರದ ಮಹದಾಸೆಯ ಅಟಲ್ ಸಾರಿಗೆ ಎಂಬ ಹೊಸ ಸಾರಿಗೆಯನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಸೇವೆಗಳ ದರವು ಸಾಮಾನ್ಯ ಸೇವೆಯ ದರದ ಅರ್ಧದಷ್ಟಾಗಿರುತ್ತದೆ’ ಎಂಬ ಒಂದು ಸಾಲಿನ ಮಾಹಿತಿಯಷ್ಟೇ ಇದೆ.

ಈ ನಡುವೆ ಕಳೆದ ನವೆಂಬರ್‌ನಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಬಿಎಂಟಿಸಿ ವತಿಯಿಂದ ಇಂದಿರಾ ಸಾರಿಗೆ ಆರಂಭಿಸಲಾಗುವುದು ಎಂದು ಘೋಷಿಸಿತ್ತು. ಇರುವ ಸೇವೆಯನ್ನೂ ಉಳಿಸಿಕೊಳ್ಳಲಿಲ್ಲ. ಹೆಸರು ಬದಲಿಸಿದ ಯೋಜನೆಯೂ ಬರಲಿಲ್ಲ ಎಂಬ ಟೀಕೆ ಪ್ರಯಾಣಿಕ ವಲಯದಲ್ಲಿ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಸಾರಿಗೆ ಪುನರಾರಂಭ ಮಾಡಿ: ಅಶೋಕ

‘ಬಿಎಂಟಿಸಿಯು ಅಟಲ್‌ ಸಾರಿಗೆ ಬಸ್‌ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿದೆ. ಕೆಲವು ಬಸ್‌ಗಳಿಗೆ ಸಾಮಾನ್ಯ ಸೀಟುಗಳನ್ನು ಅಳವಡಿಸಿ ನಗರ ಸಾರಿಗೆ ಬಸ್‌ಗಳಾಗಿ ಓಡಿಸಲಾಗುತ್ತಿದೆ. ನಮ್ಮ (ಬಿಜೆಪಿ) ಸರ್ಕಾರದ ಅವಧಿಯಲ್ಲಿ 50 ಬಸ್‌ಗಳನ್ನು ಅಟಲ್‌ ಸಾರಿಗೆಗೆ ಮೀಸಲು ಇರಿಸಲಾಗಿತ್ತು. ಈ ಸಾರಿಗೆಯನ್ನು ಪುನರಾರಂಭಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ಶಾಸಕ ಆರ್‌. ಅಶೋಕ ಪ್ರತಿಕ್ರಿಯಿಸಿದರು.

ಅಟಲ್‌ ಸಾರಿಗೆ ಬಸ್‌ ವಿಶೇಷ

* ಪ್ರಯಾಣದರದಲ್ಲಿ ಶೇ 50ರಷ್ಟು ರಿಯಾಯಿತಿ

* ವಿಶಾಲ ಒಳಾಂಗಣ

* ಬಸ್‌ನ ಕವಚಕ್ಕೆ ಅಂಟಿಕೊಂಡ ಉದ್ದ ವಿನ್ಯಾಸದ (ಮೆಟ್ರೊ ರೈಲಿನಂತೆ) ಸೀಟುಗಳು

* ಹೆಚ್ಚು ಜನರು ನಿಂತು ಪ್ರಯಾಣಿಸಲು ಸ್ಥಳಾವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.