ಪರಾರಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಹಳೆ ದ್ವೇಷದ ಕಾರಣಕ್ಕೆ ಸ್ನೇಹಿತನ ಆಟೊ ಗಾಜು ಒಡೆದು, ಚಾಕುವಿನಿಂದ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ರಾಘವೇಂದ್ರ ಬ್ಲಾಕ್ ನಿವಾಸಿ ಆಟೊ ಚಾಲಕ ಪೋತರಾಜು ಅವರ ಎರಡು ಕೈ ಬೆರಳುಗಳಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಪೋತರಾಜು ಅವರು ರಸ್ತೆ ಬದಿ ಆಟೊ ನಿಲ್ಲಿಸಿ ಹೋಗಿದ್ದರು. ರಾತ್ರಿ ಕರಗ ನೋಡಿಕೊಂಡು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಆರೋಪಿ ದೀಕ್ಷಿತ್ ತನ್ನ ಸಹಚರನ ಜತೆ ಈ ಮಾರ್ಗದಲ್ಲಿ ಹೋಗುವಾಗ ಸ್ನೇಹಿತ ಆಟೊ ನಿಲ್ಲಿಸಿರುವುದನ್ನು ಗಮನಿಸಿ, ಗಾಜು ಒಡೆದು ಹಾಕಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೋತರಾಜು ಹಾಗೂ ದೀಕ್ಷಿತ್ ನಡುವೆ ಜಗಳವಾಗಿದೆ. ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಕೈ ಬೆರಳುಗಳಿಗೆ ಗಾಯವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಘಟನೆ ಬಳಿಕ ಜನರು ಸೇರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಪೋತರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮತ್ತು ಗಾಯಾಳು ಇಬ್ಬರೂ ಸ್ನೇಹಿತರು. ಆಟೊ ಚಾಲನೆ ಮಾಡಿ ಇಬ್ಬರೂ ಜೀವನ ಸಾಗಿಸುತ್ತಿದ್ದಾರೆ. ಹತ್ತು ದಿನಗಳ ಹಿಂದೆ ಮದ್ಯದ ಪಾರ್ಟಿ ವೇಳೆ ಪೋತರಾಜು ಏಕವಚನದಲ್ಲಿ ಮಾತನಾಡಿ ಅವಮಾನ ಮಾಡಿದ ಎಂಬ ಕಾರಣಕ್ಕೆ ದೀಕ್ಷಿತ್ ಕೋಪಗೊಂಡಿದ್ದ. ಈ ವಿಚಾರಕ್ಕೆ ದ್ವೇಷ ಸಾಧಿಸುತ್ತಿದ್ದ’ ಎಂದು ಹೇಳಿದ್ದಾರೆ.
ಹನುಮಂತ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಶೋಧ ಕಾರ್ಯಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.