ADVERTISEMENT

ಗಾಜಾ ಮೇಲಿನ ದಾಳಿ ಖಂಡನೀಯ: ಸಿಪಿಎಂ ಕಾರ್ಯದರ್ಶಿ ಕೆ. ಪ್ರಕಾಶ್

ಪ್ಯಾಲೆಸ್ಟೀನ್‌ ಬೆಂಬಲಿಸಿ ಎಡ ಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:28 IST
Last Updated 17 ಜೂನ್ 2025, 15:28 IST
ಪ್ಯಾಲೆಸ್ಟೀನ್‌ ಬೆಂಬಲಿಸಿ ನಗರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೌಹಾರ್ದತಾ ದಿನಾಚರಣೆಯಲ್ಲಿ ಎಡಪಕ್ಷಗಳ ಸದಸ್ಯರು ಇಸ್ರೇಲ್‌ ವಿರುದ್ಧ ಘೋಷಣೆಗಳನ್ನು ಕೂಗಿದರು 
ಪ್ಯಾಲೆಸ್ಟೀನ್‌ ಬೆಂಬಲಿಸಿ ನಗರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೌಹಾರ್ದತಾ ದಿನಾಚರಣೆಯಲ್ಲಿ ಎಡಪಕ್ಷಗಳ ಸದಸ್ಯರು ಇಸ್ರೇಲ್‌ ವಿರುದ್ಧ ಘೋಷಣೆಗಳನ್ನು ಕೂಗಿದರು    

ಬೆಂಗಳೂರು: ‘ಎರಡು ವರ್ಷಗಳಿಂದ ಗಾಜಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಇದುವರೆಗೆ 55 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಲಕ್ಷಾಂತರ ಜನ ಗಾಯಗೊಂಡಿದ್ದಾರೆ’ ಎಂದು ಸಿಪಿಎಂ ಕಾರ್ಯದರ್ಶಿ ಕೆ. ಪ್ರಕಾಶ್ ಹೇಳಿದರು.  

ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್‌ ಪಕ್ಷ, ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸಿಸ್ಟ್‌–ಲೆನಿನಿಸ್ಟ್‌), ಸೋಷಿಯಲಿಸ್ಟ್‌ ಯೂನಿಟಿ ಸೆಂಟ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌), ಆಲ್‌ ಇಂಡಿಯಾ ಫಾರ್ವಡ್‌ ಬ್ಲಾಕ್‌ನ ಸಹಯೋಗದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೌಹಾರ್ದತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

‘ಗಾಜಾದ ಆಸ್ಪತ್ರೆಗಳು ಮತ್ತು ನಿರಾಶ್ರಿತರ ವಸತಿ ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ಮಾಡುತ್ತಿರುವುದು ಖಂಡನೀಯ. ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಶೇಕಡ 60ರಷ್ಟು ಜನ ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಗಾಜಾ ಪಟ್ಟಿಗೆ ಆಹಾರ, ನೀರು, ಇಂಧನ, ನೆರವು ಮತ್ತು ಇತರೆ ಎಲ್ಲ ಅಗತ್ಯ ವಸ್ತುಗಳ ಪೂರೈಕೆಯನ್ನು ಇಸ್ರೇಲ್‌ ಸ್ಥಗಿತಗೊಳಿಸಿದೆ. ಅಮೆರಿಕ ಮತ್ತು ಪಶ್ಚಿಮ ಯೂರೋಪಿನ ಕೆಲ ರಾಷ್ಟ್ರಗಳು ಇಸ್ರೇಲ್‌ಗೆ ಬೆಂಬಲ ನೀಡುವುದರ ಜೊತೆಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿವೆ’ ಎಂದು ಆರೋಪಿಸಿದರು. 

ADVERTISEMENT

ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ(ಎಂಎಲ್‌)ನ ಕಾರ್ಯದರ್ಶಿ ಕ್ಲಿಫ್ಟನ್‌ ರೊಜಾರಿಯೋ ಮಾತನಾಡಿ, ‘ಭಾರತವು ಪ್ಯಾಲೆಸ್ಟೀನ್‌ಗೆ ಬೆಂಬಲ ನೀಡದೇ ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವುದು ಖಂಡನೀಯ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಘ ಪರಿವಾರದ ಜೊತೆಯಲ್ಲಿ ಸೇರಿಕೊಂಡು, ಗಾಜಾ ಮೇಲಿನ ಇಸ್ರೇಲ್‌ ದಾಳಿಯನ್ನು ಧಾರ್ಮಿಕ ಯುದ್ಧವೆಂದು ಬಿಂಬಿಸುತ್ತಿದೆ. ಮತಧರ್ಮದ ಜೊತೆಗೆ ರಾಷ್ಟ್ರೀಯತೆಯನ್ನು ಗುರುತಿಸುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಇಸ್ರೇಲ್‌ನ ಜಿಯೋನಿಸ್ಟ್‌ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತಗಳು ಒಂದೇ ಆಗಿವೆ. ಇದು ಭಾರತದ ಅಂತರರಾಷ್ಟ್ರೀಯ ಸಂಬಂಧಗಳಿಗೆ ಮಾರಕವಾಗಲಿದೆ’ ಎಂದರು.

ಎಸ್‌ಯುಸಿಐ–(ಸಿ) ಕಾರ್ಯದರ್ಶಿ ಉಮಾ ಕೆ., ಎಐಎಫ್‌ಬಿನ ಅಧ್ಯಕ್ಷ ಜಿ.ಆರ್. ಶಿವಶಂಕರ್ ಮಾತನಾಡಿ, ಇಸ್ರೇಲ್‌  ಗಾಜಾ ಮೇಲೆ ನಡೆಸುತ್ತಿರುವ ಆಕ್ರಮಣ ಹಾಗೂ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಭಾರತ ಇಸ್ರೇಲ್‌ನೊಂದಿಗೆ ಹೊಂದಿರುವ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಪ್ಯಾಲೆಸ್ಟೀನ್‌ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು’ ಎಂದು ಒತ್ತಾಯಿಸಿದರು. 

ಪ್ಯಾಲೆಸ್ಟೀನ್‌ ಕವಿತೆಗಳ ಪುಸ್ತಕವನ್ನು ಸಾಹಿತಿ ಜಿ. ರಾಮಕೃಷ್ಣ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.