ರಾಮನಗರ: ತಾಲ್ಲೂಕಿನ ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯ ತನಿಖೆ ತೀವ್ರಗೊಳಿಸಿರುವ ಪೊಲೀಸರು ಭಾನುವಾರ ರಿಕ್ಕಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಮತ್ತೊಂದೆಡೆ ಘಟನಾ ಸ್ಥಳ ಮತ್ತು ರಿಕ್ಕಿ ಮನೆಗೆ ತನಿಖಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಪ್ರದೇಶದ ಸುತ್ತ ಮತ್ತೆ ಶೋಧ ಕಾರ್ಯ ನಡೆಸಿದೆ.
ರಿಕ್ಕಿ ಮನೆಯಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಅಂಗರಕ್ಷಕರು, ಕಾರು ಚಾಲಕ ಸೇರಿದಂತೆ ರಿಕ್ಕಿ ಅವರ ಮನೆಯಲ್ಲಿ ಕೆಲಸ ಮಾಡುವವರು ಹಾಗೂ ಕೃತ್ಯ ನಡೆದಾಗ ರಿಕ್ಕಿ ಅವರನ್ನು ಬಿಡದಿ ಆಸ್ಪತ್ರೆಗೆ ಕರೆತಂದಾಗ ಇದ್ದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಆರೋಪ ಪುನರುಚ್ಚಾರ: ಗುಂಡಿನ ದಾಳಿಯಲ್ಲಿ ಮೂಗು ಮತ್ತು ತೋಳಿಗೆ ಗಾಯವಾಗಿದ್ದರಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಶನಿವಾರ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಪೊಲೀಸರ ಒಂದು ತಂಡ ಆಸ್ಪತ್ರೆಗೆ ತೆರಳಿ ರಿಕ್ಕಿ ಹೇಳಿಕೆ ದಾಖಲಿಸಿಕೊಂಡಿದೆ.
ಈ ವೇಳೆ, ಪ್ರಕರಣದ ದೂರುದಾರನಾಗಿರುವ ತನ್ನ ಕಾರು ಚಾಲಕ ಬಸವರಾಜು ಮಾಡಿರುವ ಆರೋಪವನ್ನು ರಿಕ್ಕಿ ಪುನರುಚ್ಚರಿಸಿದ್ದಾರೆ. ಕೃತ್ಯದ ಹಿಂದೆ ರಾಕೇಶ್ ಮಲ್ಲಿ, ಮಲತಾಯಿ ಅನುರಾಧ, ರಿಯಲ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಇರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನೋಟಿಸ್ ನೀಡಲು ತಯಾರಿ: ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಅನುಮಾನ ವ್ಯಕ್ತಪಡಿಸಿರುವ ನಾಲ್ವರು ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ರಿಕ್ಕಿ ಅವರ ಮಲತಾಯಿ ಅನುರಾಧ ಅವರು ಘಟನೆಗೆ ಐದು ದಿನ ಮೊದಲೇ ದೇಶ ತೊರೆದಿದ್ದಾರೆ. ಅವರು ಯಾವ ದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇಲ್ಲ.
ರಿಕ್ಕಿ ಅವರ ಆಸ್ತಿ, ಕಂಪನಿಗಳು, ಪಾಲುದಾರಿಕೆ, ಹೂಡಿಕೆ, ರಿಯಲ್ ಎಸ್ಟೇಟ್ ವ್ಯವಹಾರ, ಹಣಕಾಸಿನ ವ್ಯವಹಾರ, ಹಲವರ ಜೊತೆಗಿನ ವ್ಯಾಜ್ಯ ಹಾಗೂ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಸಹ ಪೊಲೀಸರ ತಂಡ ಮಾಹಿತಿ ಕಲೆಹಾಕುತ್ತಿದೆ.
ಜೊತೆಗೆ ರಿಕ್ಕಿ, ಚಾಲಕ, ಅಂಗರಕ್ಷಕರು, ಮನೆಯಲ್ಲಿ ಕೆಲಸ ಮಾಡುವವರೆಲ್ಲರ ಮೊಬೈಲ್ ಕರೆ ವಿವರ ಹಾಗೂ ಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ. ದೂರಿನಲ್ಲಿ ಹೇಳಿರುವಂತೆ ರಿಕ್ಕಿ ಅವರ ಕಾರಿನ ಓಡಾಟದ ಸಮಯವನ್ನು ಮತ್ತೆ ಖಚಿತಪಡಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಮನೆ ಬಳಿ ಗಾಳಿಯಲ್ಲಿ ಗುಂಡು: ಕೃತ್ಯ ನಡೆದ ದಿನ ರಾತ್ರಿ ರಿಕ್ಕಿ ಮನೆಯಲ್ಲಿದ್ದಾಗ ನಾಯಿಗಳು ಬೊಗಳಿದ ಶಬ್ದ ಕೇಳಿದೆ. ಆಗ ಒಬ್ಬ ಅಂಗರಕ್ಷಕ ಹೊರಗಡೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ರಿಕ್ಕಿ ಕಾರಿನಿಂದ ಹೊರಟು ಹೋದವರು ಮತ್ತೆ ಮನೆಗೆ ಬಂದು ಕೆಲ ಹೊತ್ತು ಇದ್ದರು. ಮತ್ತೆ ಹೊರಟಾಗ ಕಾರಿನ ಮೇಲೆ ಗುಂಡಿನ ದಾಳಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಕುರಿತು ಹಲವು ಆಯಾಮಗಳಿಂದ ತನಿಖೆ ನಡೆಯುತ್ತಿದೆ. ರಿಕ್ಕಿ ಆಪ್ತರ ವಿಚಾರಣೆ ಜೊತೆಗೆ ತಾಂತ್ರಿಕ ಮಾಹಿತಿ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಯಾರಿಗೂ ನೋಟಿಸ್ ಕೊಟ್ಟಿಲ್ಲ- ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗುಂಡಿನ ದಾಳಿ: ಪೊಲೀಸರಿಗೆ ಕಾಡುತ್ತಿವೆ ಹಲವು ಅನುಮಾನ
ಗುಂಡಿನ ದಾಳಿ ಘಟನೆ ಕುರಿತಂತೆ ರಿಕ್ಕಿ ಕಾರು ಚಾಲಕ ಹಾಗೂ ಅಂಗರಕ್ಷಕನ ಹೇಳಿಕೆ ಬಗ್ಗೆ ಪೊಲೀಸರಿಗೆ ಹಲವು ಅನುಮಾನ ಕಾಡುತ್ತಿವೆ. ಘಟನಾ ಸ್ಥಳದ ಸ್ಥಿತಿಗೂ ಮತ್ತು ಹೇಳಿಕೆಗಳಿಗೂ ಪರಸ್ಪರ ತಾಳೆಯಾಗುತ್ತಿಲ್ಲ. ಹಾಗಾಗಿ ಪ್ರಕರಣ ಪೊಲೀಸರಿಗೆ ಸವಾಲಾಗಿದೆ. ರಿಕ್ಕಿ ಸುತ್ತಮುತ್ತ ಸದಾ ಇಬ್ಬರು ಅಂಗರಕ್ಷಕರಿರುತ್ತಾರೆ. ಬೆಂಗಳೂರಿಗೆ ಹೋಗುವಾಗ ಒಬ್ಬ ಅಂಗರಕ್ಷಕ ಮಾತ್ರ ಇದ್ದ. ಮತ್ತೊಬ್ಬ ಅಂಗರಕ್ಷಕ ಎಲ್ಲಿದ್ದ? ಚಾಲಕನಿದ್ದರೂ ಸಾಮಾನ್ಯವಾಗಿ ರಿಕ್ಕಿ ಅವರೇ ಕಾರು ಚಾಲನೆ ಮಾಡುತ್ತಾರೆ. ಘಟನೆ ದಿನ ಚಾಲಕ ಬಸವರಾಜು ಚಾಲನೆ ಮಾಡುತ್ತಿದ್ದ. ರಿಕ್ಕಿ ಅಥವಾ ಅಂಗರಕ್ಷಕ ರಾಜ್‌ಪಾಲ್ ಮುಂದೆ ಕೂತಿರಲಿಲ್ಲ. ಬದಲಿಗೆ ಇಬ್ಬರೂ ಹಿಂದೆ ಕುಳಿತಿದ್ದು ಯಾಕೆ ಎಂಬ ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. ಕಾರಿನ ಮೇಲೆ ಗುಂಡಿನ ದಾಳಿ ನಡೆದಾಗ ಅಂಗರಕ್ಷಕ ಪ್ರತಿದಾಳಿ ನಡೆಸಿಲ್ಲ ಏಕೆ? ಘಟನಾ ಸ್ಥಳದ ರಸ್ತೆ ಮತ್ತು ಮನೆ ಪ್ರವೇಶ ದ್ವಾರದ ಬಳಿ ಯಾವುದೇ ಬೀದಿದೀಪದ ವ್ಯವಸ್ಥೆ ಇಲ್ಲ. ಆದರೂ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಹಾಗಿದ್ದರೆ ದಾಳಿ ಮಾಡಿದವರು ಒಬ್ಬರೇ ಅಥವಾ ಅದಕ್ಕೂ ಹೆಚ್ಚು ಮಂದಿ ಇದ್ದರೆ? ಕಣ್ಣಳತೆಯ ದೂರದಲ್ಲಿ ಗುಂಡಿನ ದಾಳಿ ನಡೆದರೂ ಆಗಷ್ಟೇ ಕಾರು ಬಿಡಲು ಪ್ರವೇಶದ್ವಾರ ತೆರೆದ ಭದ್ರತಾ ಸಿಬ್ಬಂದಿಗೆ ದಾಳಿ ವಿಷಯ ಗೊತ್ತಾಗಲಿಲ್ಲವೇ? ಹೀಗೆ ಹಲವು ಅನುಮಾನಗಳು ಪೊಲೀಸರನ್ನು ಕಾಡುತ್ತಿವೆ. ಹಾಗಾಗಿ ಘಟನೆ ದಿನ ಇದ್ದವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಕೇಶ್ ಮಲ್ಲಿ ಭಾಗಿ ವಿಚಾರ ಗೊತ್ತಿಲ್ಲ: ಗೃಹ ಸಚಿವ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಕೇಶ್ ಮಲ್ಲಿ ಭಾಗಿಯಾಗಿರುವ ವಿಚಾರ ಗೊತ್ತಿಲ್ಲ. ತನಿಖೆ ಬಳಿಕ ಯಾರೆಂದು ಗೊತ್ತಾಗಲಿದೆ. ಇಂತಹ ವಿಷಯದಲ್ಲಿ ಉಹಾಪೋಹ ಮಾಡಲಾಗದು. ಕೃತ್ಯ ಎಸಗಿದವರ ಬಂಧನದ ಬಳಿಕ ಪ್ರಕರಣದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಘಟನೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.