ADVERTISEMENT

‘ಅಲ್ಲಾ ಹು ಅಕ್ಬರ್‌’ ಕೂಗುವಂತೆ ಒತ್ತಾಯಿಸಿ ಹಲ್ಲೆ: ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 16:35 IST
Last Updated 17 ಏಪ್ರಿಲ್ 2024, 16:35 IST
FIR.
FIR.   

ಬೆಂಗಳೂರು: ‘ಜೈಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಮೂವರು ಯುವಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ’ ಎಂದು ಆರೋಪಿಸಿ ಸಲ್ಲಿಸಲಾದ ದೂರನ್ನು ಆಧರಿಸಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆಯಲ್ಲಿ ಸಹಕಾರ ನಗರದ ನಿವಾಸಿಗಳಾದ ವಿನಾಯಕ್, ರಾಹುಲ್ ಹಾಗೂ ಪವನ್ ಕುಮಾರ್ ಎಂಬವರು ಗಾಯಗೊಂಡಿದ್ದಾರೆ.

‘ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ದೂರುದಾರರು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ದೃಶ್ಯಾವಳಿ ಪರಿಶೀಲಿಸಲಾಗಿದೆ. ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಸದ್ಯಕ್ಕೆ ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರು ಉಲ್ಲೇಖಿಸಿಲ್ಲ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು. ಘಟನೆಯಲ್ಲಿ ಯುವಕನೊಬ್ಬನ ತಲೆಗೆ ಗಾಯವಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಹಲ್ಲೆಗೆ ಒಳಗಾದ ಮೂವರು ಮಧ್ಯಾಹ್ನ 3.20ರ ಸುಮಾರಿಗೆ ಕಾರಿನಲ್ಲಿ ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆ.ಜಿ ಹಳ್ಳಿಯಿಂದ ಚಿಕ್ಕಬೆಟ್ಟಹಳ್ಳಿ ರಸ್ತೆ ಮಾರ್ಗವಾಗಿ ಎಂ.ಎಸ್.ಪಾಳ್ಯದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಹೋಗುತ್ತಿದ್ದರು. ಕಾರಿನಲ್ಲಿ ಶ್ರೀರಾಮನ ಭಾವಚಿತ್ರದ ಧ್ವಜ ಕಟ್ಟಿಕೊಂಡಿದ್ದು, ಜತೆಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಕಾರನ್ನು ಅಡ್ಡಗಟ್ಟಿ,  ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೇ ಅಲ್ಲಾ ಹು ಅಕ್ಬರ್‌ ಎಂದು ಕೂಗುವಂತೆ ಬಲವಂತ ಮಾಡಿದರು. ಹಾಗೆ ಕೂಗುವುದಿಲ್ಲ ಎಂದಾಗ ಅವರೊಂದಿಗೆ ಮತ್ತೆ ಮೂವರು ಸೇರಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದರು’ ಎಂದು ಡಿ.ಪವನ್‌ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ಧಾರೆ.

‘ರಾಹುಲ್‌ ತಲೆಗೆ ಪೆಟ್ಟು ಬಿದ್ದಿದೆ. ಮೂಗಿನ ಮೂಳೆ ಮುರಿದಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದೆವು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.