ಬಂಧನ( ಸಾಂಕೇತಿಕ ಚಿತ್ರ)
ಬೆಂಗಳೂರು: ಮನೆಗೆ ಪಾರ್ಸೆಲ್ ತಂದುಕೊಡದ ಕೊರಿಯರ್ ಬಾಯ್‌ಗೆ ಚಾಕುವಿನಿಂದ ಇರಿದ ಆರೋಪಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಗಾಯಗೊಂಡಿರುವ ಕೊರಿಯರ್ ಬಾಯ್ ಮಹಮ್ಮದ್ ಶಫಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರ್ಬಾಜ್ ಬಂಧಿತ ಆರೋಪಿ.
‘ಆನೆಪಾಳ್ಯದ ಗಲ್ಲಿಯೊಂದರಲ್ಲಿ ವಾಸವಿರುವ ಅರ್ಬಾಜ್‌ಗೆ ಪಾರ್ಸೆಲ್ ತಲುಪಿಸುವ ಸಲುವಾಗಿ ಶಫಿ ಕರೆ ಮಾಡಿ ಮನೆಯ ವಿಳಾಸ ಕೇಳಿದ್ದಾರೆ. ಆರೋಪಿ ತಾವಿರುವ ಮನೆಯ ಸ್ಥಳದ ಮಾಹಿತಿ ಕಳುಹಿಸಿದ್ದಾರೆ. ವಿಳಾಸ ಗೊತ್ತಾಗದೆ ಶಫಿ ಮತ್ತೆ ಕರೆ ಮಾಡಿದ್ದಾರೆ. ಕೊನೆಗೆ ಅರ್ಬಾಜ್ ತಮ್ಮ ತಾಯಿಯನ್ನೇ ಪಾರ್ಸೆಲ್ ತೆಗೆದುಕೊಂಡು ಬರಲು ಕಳುಹಿಸಿದ್ದಾರೆ. ಆಗ ಶಫಿ ಕರೆ ಮಾಡಿ ಒಟಿಪಿ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ, ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಬಳಿಕ ಆರೋಪಿ ಬಚ್ಚಿಟ್ಟುಕೊಂಡಿದ್ದ. ಘಟನೆ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.