ADVERTISEMENT

ಭಾರತದಲ್ಲಿ ನರಮೇಧ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷರ ನೆರವು ಕೇಳಿದ್ದ ಟೆಕಿ!

‘ಭಾರತದಲ್ಲಿ ಜನರ ರಕ್ಷಿಸಿ ವಾಕ್ ಸ್ವಾತಂತ್ರ್ಯ ಮರುಸ್ಥಾಪಿಸಿ’: ಮರಣ ಪತ್ರದಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 0:42 IST
Last Updated 12 ಡಿಸೆಂಬರ್ 2024, 0:42 IST
ಅತುಲ್‌ ಸುಭಾಷ್ 
ಅತುಲ್‌ ಸುಭಾಷ್    

ಬೆಂಗಳೂರು: ಖಾಸಗಿ ಕಂಪನಿಯ ನಿರ್ದೇಶಕ, ಉತ್ತರ ಪ್ರದೇಶದ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ಸಹೋದರ ಬಿಕಾಸ್ ಕುಮಾರ್ ಅವರು ನೀಡಿದ ದೂರು ಆಧರಿಸಿ ಅತುಲ್ ಸುಭಾಷ್‌ ಅವರ ಪತ್ನಿ, ಆಕೆಯ ತಾಯಿ, ಸಹೋದರ ಹಾಗೂ ಚಿಕ್ಪಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮತ್ತೊಂದೆಡೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಅತುಲ್‌ ಸುಭಾಷ್‌ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದು, ಕುಟುಂಬಸ್ಥರು ಉತ್ತರ ಪ್ರದೇಶದಿಂದ ನಗರಕ್ಕೆ ಬಂದಿದ್ದರು ಎಂದು ಮೂಲಗಳು ಹೇಳಿವೆ.

ADVERTISEMENT

ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ಅತುಲ್ ಸುಭಾಷ್ ಅವರು ಸುಮಾರು 26 ಪುಟಗಳ ಮರಣ ಪತ್ರ ಬರೆದು, ಅದನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್, ಕಚೇರಿ, ಸರ್ಕಾರೇತರ ಎಸ್‌ಐಎಫ್‌ಎಫ್ ಸಂಸ್ಥೆ, ಕುಟುಂಬ ಸದಸ್ಯರಿಗೆ ಇ–ಮೇಲ್ ಕಳುಹಿಸಿ ಮಾರತ್‌ಹಳ್ಳಿಯ ಮಂಜುನಾಥ್ ಲೇಔಟ್‌ನ ಅಪಾರ್ಟ್‌ಮೆಂಟ್‌ ತಮ್ಮ ಫ್ಲ್ಯಾಟ್‌ನಲ್ಲಿ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

‘ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದರು. ತಪ್ಪು ಇಲ್ಲದಿದ್ದರೂ ನನ್ನ ವಿರುದ್ಧ ಒಂಬತ್ತು ಪ್ರಕರಣ ದಾಖಲು ಮಾಡಿದ್ದರು. ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಎಂಟು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಂದು ಪ್ರಕರಣವನ್ನು ಆಕೆ ವಾಪಸ್ ಪಡೆದುಕೊಂಡಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಆತ್ಮಹತ್ಯೆಗೂ ಮುನ್ನ ವಿಡಿಯೊ ಮಾಡಿಟ್ಟು ನೆರವು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್​ ಅವರ ಬಳಿ ಸಹಾಯ ಕೇಳಿದ್ದಾರೆ.

‘ಭಾರತದಲ್ಲಿ ನರಮೇಧ ನಡೆಯುತ್ತಿದೆ. ಜನರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯ ಮರುಸ್ಥಾಪಿಸಿ’ ಎಂದೂ ಆ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.

90 ನಿಮಿಷಗಳ ವಿಡಿಯೊ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವಿಡಿಯೊವನ್ನು ಕಂಪನಿಯ ಸಹೋದ್ಯೋಗಿಗಳಿಗೆ ಕಳುಹಿಸಿದ್ದರು. ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಅಂತ್ಯಕ್ರಿಯೆಗೆ ಪತ್ನಿ ಬರುವುದು ಬೇಡ: ‘ತನ್ನ ಮಗನನ್ನು ಪೋಷಕರಿಗೆ ಒಪ್ಪಿಸಿ. ಯಾವುದೇ ಕಾರಣಕ್ಕೂ ಪತ್ನಿ ಹಾಗೂ ಆಕೆಯ ಮನೆಯವರು ಮೃತದೇಹವನ್ನು ನೋಡಬಾರದು’ ಎಂದು ಉಲ್ಲೇಖಿಸಿದ್ದಾರೆ. ನಾಲ್ಕು ವರ್ಷದ ಪುತ್ರನಿಗೆ ಉಡುಗೊರೆ ತಲುಪಿಸಿ. ನ್ಯಾಯಾಲಯದಲ್ಲೂ ನ್ಯಾಯ ಸಿಗುತ್ತಿಲ್ಲ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

‘ನ್ಯಾಯ ಸಿಗುವುದು ಬಾಕಿಯಿದೆ’ ಎಂಬ ಪೋಸ್ಟರ್ ಅನ್ನು ಗೋಡೆಗೆ ಅಂಟಿಸಿ, ತಾನು ಪೂರ್ಣಗೊಳಿಸಿರುವ ಕೆಲಸಗಳ ಪಟ್ಟಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ನ್ಯಾಯ ಸಿಗುವವರೆಗೂ ಚಿತಾಭಸ್ಮವನ್ನು ನೀರಿನಲ್ಲಿ ಬಿಡುವುದು ಬೇಡ. ನ್ಯಾಯ ಕೊಡಲು ಸಾಧ್ಯ ಆಗದಿದ್ದರೆ ಚಿತಾಭಸ್ಮವನ್ನು ನ್ಯಾಯಾಲಯದ ಎದುರು ಚರಂಡಿಗೆ ಹಾಕಿ’ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ಅತುಲ್‌ ಷೋಷಕರು ನಿರಾಕರಿಸಿದ್ಧಾರೆ.

ಕಂಪ್ಯೂಟರ್‌ ಐ.ಡಿ ವಾಪಸ್‌

ಸಾಯುವುದಕ್ಕೂ ಮುನ್ನ ಕಂಪ್ಯೂಟರ್ ಹಾಗೂ ಗುರುತಿನ ಚೀಟಿಗಳನ್ನು ಅತುಲ್‌ ಕಂಪನಿಗೆ ವಾಪಸ್ ನೀಡಿದ್ದರು. ಮೊಬೈಲ್​ಗೆ ಹಾಕಿದ್ದ ಲಾಕ್‌ ತೆಗೆದಿದ್ದರು. ಕಾರು ಬೈಕ್​ನ ಕೀ ಅನ್ನು ಕಾಣುವಂತೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.‌ ಪ್ರಾಥಮಿಕ ತನಿಖೆಯ ಪ್ರಕಾರ ಅತುಲ್ ಸುಭಾಷ್ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಅತುಲ್ ಸಾವಿಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕು ಎಂದು ಟೆಕಿಗಳು ಆಗ್ರಹಿಸಿದ್ದಾರೆ.

ಪ್ರತಿ ತಿಂಗಳು ₹2 ಲಕ್ಷಕ್ಕೆ ಬೇಡಿಕೆ

‘ಅತುಲ್‌ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು. ಅಲ್ಲದೇ ವರದಕ್ಷಿಣೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ₹3 ಕೋಟಿಗೆ ಬೇಡಿಕೆ ಇಡಲಾಗಿತ್ತು. ಪ್ರತಿ ತಿಂಗಳು ಜೀವನಾಂಶಕ್ಕೆ ₹2 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಇದರಿಂದ ಅತುಲ್ ಅವರು ಮಾನಸಿಕ ದೈಹಿಕವಾಗಿ ಮನನೊಂದಿದ್ದರು. ನಾಲ್ವರ ಪ್ರಚೋದನೆಯಿಂದಲೇ ಮೃತಪಟ್ಟಿದ್ದಾರೆಂದು’ ಎಂದು ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.