ADVERTISEMENT

‘ಆಟೊ ...ನೋ ಮೀಟರ್‌’..ಜಾಲತಾಣದಲ್ಲಿ ಕಾವೇರಿದ ಚರ್ಚೆ

ಓದುಗರ ಪ್ರತಿಸ್ಪಂದನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
ಪ್ರಜಾವಾಣಿಯ ಮೆಟ್ರೊ ಪುರವಣಿಯಲ್ಲಿ ಪ್ರಕಟವಾದ ವರದಿ
ಪ್ರಜಾವಾಣಿಯ ಮೆಟ್ರೊ ಪುರವಣಿಯಲ್ಲಿ ಪ್ರಕಟವಾದ ವರದಿ   

‘ಪ್ರಜಾವಾಣಿ’ಯ ‘ಮೆಟ್ರೊ’ ಪುರವಣಿಯಲ್ಲಿ ಜೂನ್‌ 18ರಂದು ಮುಖಪುಟದಲ್ಲಿ ಪ್ರಕಟವಾಗಿದ್ದ ‘ಆಟೊ...ನೋ ಮೀಟರ್‌, ನಾವ್‌ ಹೇಳಿದ್ದೇ ರೇಟ್!’ ವರದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಆಟೊ ಚಾಲಕರು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೂ ಕೆಲವರು ಬಡಪಾಯಿಗಳ ಮೇಲೆ ಏಕೆ ನಿಮ್ಮ ಕಣ್ಣು. ಕೋಟಿ, ಕೋಟಿ ನುಂಗುವ ರಾಜಕಾರಣಿಗಳು, ಅಧಿಕಾರಿಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆಯ್ದ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಆಟೊದವರು ಹೇಳಿದ ಕಡೆ ಹೋಗಿದ್ದರೆ ಓಲಾ, ಉಬರ್‌ ಬರುತ್ತಿರಲಿಲ್ಲ. ಎಲ್ಲೋ ಒಂದೆರಡು ಆಟೊದವರು ಮಾತ್ರ ಹೇಳಿದ ಕಡೆಗೆ ಬರುತ್ತಾರೆ. ಸಂಜೆ ಆದರಂತೂ ಮುಗಿದೇ ಹೋಯಿತು. ಬಾಯಿಗೆ ಬಂದಂತೆ ದುಡ್ಡು ಕೇಳುತ್ತಾರೆ. ಇಂದು ಆಟೊಗಳಿಗಿಂತ ಕಡಿಮೆ ದರದಲ್ಲಿ ಕ್ಯಾಬ್‌ ದೊರೆಯುತ್ತಿವೆ. ಹೀಗಿರುವಾಗ ಯಾರು ತಾನೆ ಆಟೊ ಹತ್ತುತ್ತಾರೆ ಹೇಳಿ. ಯಾವುದೊ ಅಂತರರಾಷ್ಟ್ರೀಯ ಕಂಪನಿಗೆ ಲಾಭ ಮಾಡಿ ಕೊಡುವದಕ್ಕಿಂತ ನಮ್ಮ ಕನ್ನಡಿಗರಿಗೆ ಲಾಭ ಮಾಡಿ ಕೊಡುವ ಆಲೋಚನೆ ಬಹುತೇಕರಿಗೆ ಇರುತ್ತದೆ. ಆದರೆ ಹಣದಾಸೆ ಮಿತಿ ಮೀರಿದಾಗ ವಿಧಿಯಿಲ್ಲದೇ ಕ್ಯಾಬ್ ಮೊರೆ ಹೋಗಬೇಕಾಗುತ್ತೆ ಎಂದು ನಟರಾಜು ಎಚ್‌.ಎನ್‌. ಪ್ರತಿಕ್ರಿಯಿಸಿದ್ದಾರೆ. 21 ಜನರು ಇದನ್ನು ಮೆಚ್ಚಿದ್ದಾರೆ.

ADVERTISEMENT

ಬಡವರ ದುಡಿಮೆ ಮೇಲೆ ಯಾಕ್ರಿ ಕಣ್ಣು

ಯಾರೋ ಒಂದಿಬ್ಬರು ಮಾಡುವ ತಪ್ಪು ತಪ್ಪೇ ಸರಿ. ಇದರ ಬಗ್ಗೆ ನೀವು ತೊರಿಸುವ ಕಾಳಜಿಯನ್ನು ಬೆಂಗಳೂರು ರಸ್ತೆಗಳ ಬಗ್ಗೆ ತೋರಿಸಿ, ವರದಿ ಮಾಡಿ. ಮಳೆಗಾಲದಲ್ಲಿ ರಸ್ತೆಯಲ್ಲಿ ಆಟೊ ಓಡಿಸಿ ಆಗ ನಿಮಗೂ ಕಷ್ಟ ಗೊತ್ತಾಗುತ್ತೆ. ಸಮಾಜದ ಪ್ರಭಾವಿ ಕಳ್ಳರ ಬಗ್ಗೆ ವರದಿ ಮಾಡಿ. ಅದನ್ನು ಬಿಟ್ಟು ಬಡವರ ದುಡಿಮೆ ಮೇಲೆ ಯಾಕ್ರಿ ಕಣ್ಣು ಎಂದು ಪುಟ್ಟೇಗೌಡ ತೂಕನಹಳ್ಳಿ ಪ್ರಶ್ನಿಸಿದ್ದಾರೆ.

‘ಒಂದಿಬ್ಬರು ತಪ್ಪು ಮಾಡ್ತಾ ಇಲ್ಲ. ಒಂದಿಬ್ಬರೇ ಸರಿಯಾಗಿದ್ದಾರೆ.ಮಿಕ್ಕಿದವರೆಲ್ಲ ₹80-100 ಕೇಳುತ್ತಾರೆ. ಪ್ರಜಾವಾಣಿ ಎಲ್ಲವನ್ನೂ ವರದಿ ಮಾಡುತ್ತೆ. ಎಲ್ಲ ಏರಿಯಾಗಳಿಗೂ, ನಗರಗಳಿಗೂ ಈ ಸಮಸ್ಯೆ ಅನ್ವಯಿಸುತ್ತೆ. ಆದ್ದರಿಂದಲೇ ಈ ವಿಷಯ ಇಷ್ಟೊಂದು ಪ್ರಾಮುಖ್ಯತೆ ಪಡೆದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ ಎಂದು ರಾಜು ಗಂಗಾಧರ ಎಂಬುವವರು ಸಮರ್ಥಿಸಿಕೊಂಡಿದ್ದಾರೆ.

ಆಟೊ ಮಾಫಿಯಾ ಜಗತ್ತು ನೋಡಬೇಕೇ... ಯಲಹಂಕ– ಕೋಗಿಲು ಸರ್ಕಲ್‌ಗೆ ಬನ್ನಿ. ಆಟೊದವರ ಹೇಳುವ ಬಾಡಿಗೆ ಕೇಳಿ ನಾವು ಬೆಂಗಳೂರಲ್ಲಿ ಇದ್ದೇವಾ ಅನ್ನಿಸುತ್ತೆ. ಅಲ್ಲಿ ಯಾವ ಪೊಲೀಸರ ಕಾನೂನು ನಡೆಯಲ್ಲ. ‘ಅಡ್ಜಸ್ಟ್ ಮಾಡ್ಕೊಂಡ್ ಹೋಗ್ರಿ’ ಎಂದು ಪೊಲೀಸರೇ ದಬಾಯಿಸ್ತಾರೆ ಎಂದು ಗೋಕರೆ ಕೆ. ಗೋವಿಂದರಾಜು ಎನ್ನುವವರು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಮಾಫಿಯಾ ಯಾರದ್ದು?

ಗುರುಗಳೇ...ಮಾಫಿಯಾ ಇರೋದು ಶಾಲೆ–ಕಾಲೇಜು, ಆಸ್ಪತ್ರೆಗಳದ್ದು. ಬಡವರ ಮೇಲೆ ಏಕೆ ಇಂತಹ ಪದ ಪ್ರಯೋಗ ಎಂದು ಕಿರಣ್‌ ಖುಷಿ ಎಂಬುವರು ಕಾಲೆಳೆದಿದ್ದಾರೆ. ಅದಕ್ಕೆ ಗೋವಿಂದರಾಜು ಅವರು, ಕೋಗಿಲು ಕ್ರಾಸ್‌ನಲ್ಲಿ ತುಂಬು ಬಸಿರಿಯೊಂದಿಗೆ ಆಟೊ ಚಾಲಕರು ಅಮಾನವೀಯವಾಗಿ ವರ್ತಿಸಿದ ನಿದರ್ಶನ ನೀಡಿದ್ದಾರೆ.

ಕರೆದ ಕಡೆ ಬರಲ್ಲ, ದುರಹಂಕಾರಿ ಮಾತು, ಎಲ್ಲರಿಗೂ ಇದು ಅನ್ವಯಿಸಲ್ಲ. ಇದು ಬೆಂಗಳೂರಿಗೆ ಸೀಮಿತ ಅಲ್ಲ.. ದೇಶದಾದ್ಯಂತ ಇದೇ ಧೋರಣೆ ಎಂದಿದ್ದಾರೆ ಸೆಂಥಿಲ್‌ ಕುಮಾರ್‌.

ಆಟೊದವರು ಹಗಲು ದರೋಢೆಕೋರರು. ಓಲಾ, ಉಬರ್‌, ವೊಗೊ ಬೌನ್ಸ್‌ ಡ್ರೈವ್‌ಜಿಗಳನ್ನು ಬಳಸಿ. ಗ್ರಾಹಕರನ್ನು ಲೂಟಿ ಮಾಡುವ ಆಟೊ ಬೇಡ ಎಂದು ಸಂತೋಷ್‌ ಕುಮಾರ್‌ ಎಚ್‌. ಕಿವಿಮಾತು ಹೇಳಿದ್ದಾರೆ.

ನಾಗರಾಜ ಮುಲ್ಲೂರು, ಇವರನ್ನು ಕೇಳೋರು ಯಾರೂ ಇಲ್ಲ ಎಂದರೆ, ಹೊಸ ಪೊಲೀಸ್‌ ಕಮಿಷನರ್‌ ಆಟೊದವರಿಗೆ ಕಡಿವಾಣ ಹಾಕಬೇಕು ಎಂದು ಬಸವರಾಜ ರಾಜ್‌ ಎನ್ನುವವರು ಮನವಿ ಮಾಡಿದ್ದಾರೆ.

ಆಟೊಗಳಿಗಿಂತ ಕ್ಯಾಬ್‌ಗಳೇ ವಾಸಿ. ಜಾಸ್ತಿ, ಕಮ್ಮಿ ರೇಟ್‌ ಇಲ್ಲ. ಬುಕ್‌ ಮಾಡುವಾಗಲೇ ರೇಟ್‌ ತೋರಿಸುತ್ತದೆ. ಚಾಲಕರ ಜತೆ ಜಗಳ, ಗ್ರಾಹಕರ ಶೋಷಣೆ ಇರುವುದಿಲ್ಲ ಎಂದು ಅಭಿಷೇಕ್‌ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಕೈ ಮುಗಿದು ಏರು ಇದು ಕನ್ನಡದ ತೇರು

ಆಟೊದಲ್ಲಿ ಹೋಗಬೇಡಿ, ಆಟೋಗಾಗಿ ಕಾಯಬೇಡಿ.ಯಾಕಂದ್ರೆ ಕೆಲವು ಆಟೊ ಚಾಲಕರಿಗೆ ಇರುವಂತಹ ಕೊಬ್ಬು ದುರಹಂಕಾರ ಊರಿಗೆಲ್ಲಾ ಹಂಚಿದರೂ ಖಾಲಿಯಾಗಲ್ಲ. ಅಷ್ಟು ಇರುತ್ತೆ... ಕೆಲವು ಆಟೊದವರು ಕತ್ತಲಾಗುವುದೇ ತಡ ಅಂತ ಬಾಯಿಗೆ ಬಂದಂಗೆ ಕೇಳ್ತಾರೆ. ಇನ್ನೂ ಮಳೆ ಬರುವಾಗ ಕೇಳಲೆ ಬಾರದು...ಕೈ ಮುಗಿದು ಏರು ಇದು ಕನ್ನಡದ ತೇರು
ಆಟೊಗೆ ಇರೋ ಬೆಲೆ ಆಟೊ ಚಾಲಕರಿಗೆ ಇಲ್ಲ.. ಎಂದು ರೆಬಲ್‌ ಕನ್ನಡಿಗ ಮುದ್ದುರಾಜ್‌ ಮಂಡ್ಯ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ನಾವು ಕರೆದ ಜಾಗಕ್ಕೆ ಬರುವುದಿಲ್ಲ ಅವರು ಹೋಗಬೇಕಾಗಿದೆ ಜಾಗದಲ್ಲಿ ನಮ್ಮ ಜಾಗ ಇದ್ದರೆ ಮಾತ್ರ ಬರುತ್ತಾರೆ ಎಂದು ಕಾತಿರಾವಣ ಕುಮ್ಮಿ ಕುಕ್ಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.