
ಯಲಹಂಕ: ಕೆರೆಗಳ ಮಹತ್ವ ಹಾಗೂ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ಆವಲಹಳ್ಳಿ ಕೆರೆ ಉಳಿಸಿʼ ಆಂದೋಲನದ ನಡೆಸಿ, ‘ಕೆರೆಗಾಗಿ ನಡಿಗೆʼ ಆಯೋಜಿಸಲಾಗಿತ್ತು.
‘ಗ್ರೀನ್ ಸರ್ಕಲ್ʼ ಸಂಘಟನೆ, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಆವಲಹಳ್ಳಿ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳ ಸಹಯೋಗದಲ್ಲಿ ಆಂದೋಲನ ನಡೆಯಿತು.
ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಆವಲಹಳ್ಳಿ ಕೆರೆ ಹಾಗೂ ಕೃಷ್ಣಸಾಗರ ಕೆರೆಕಟ್ಟೆ ಏರಿಯ ಮೇಲೆ ಎರಡು ಸುತ್ತು ನಡೆದರು.
ವಿಶ್ವನಾಥ್ ಮಾತನಾಡಿ, ‘ಅಪಾರ್ಟ್‌ಮೆಂಟ್‌ಗಳು ಹಾಗೂ ಮನೆಗಳ ಕೊಳಚೆನೀರನ್ನು ಕೆರೆಗೆ ಹರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದರಿಂದ ಅಂತರ್ಜಲ ಕಲುಷಿತವಾಗುವುದರ ಜೊತೆಗೆ ಪಕ್ಷಿಗಳೂ ಇತ್ತ ಸುಳಿಯುವುದಿಲ್ಲ. ಕೊಳಚೆ ನೀರು ಬಿಡುವವರ ಮನೆಯ ನೀರಿನ ಸಂಪರ್ಕ ಬಂದ್ ಮಾಡಿ, ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಕೆರೆಗಳ ಸಂರಕ್ಷಣೆ ಕುರಿತ ಹಾಡು, ನೃತ್ಯ ಹಾಗೂ ನಾಟಕ ಪ್ರದರ್ಶನ ಗಮನ ಸೆಳೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಾವತಮ್ಮ, ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಮಾಜಿ ಉಪಾಧ್ಯಕ್ಷರಾದ ಎಸ್.ಜಿ.ಪ್ರಶಾಂತ್‌ರೆಡ್ಡಿ, ಜಿ.ಸಿ.ಮಂಜುನಾಥ್, ಸದಸ್ಯರಾದ ನಂಜೇಗೌಡ, ಕೆ.ಬಾಬು, ಬಿಜೆಪಿ ಮುಖಂಡರಾದ ಕೇಶವಮೂರ್ತಿ, ಗಿರೀಶ್, ಗ್ರೀನ್ ಸರ್ಕಲ್ ಸಂಘಟನೆಯ ಮುಖ್ಯ ಸಂಚಾಲಕ ಸೆಲ್ವರಾಜ್, ಕಾರ್ಯದರ್ಶಿ ಕುಮಾರ್ ಕಲ್ಯಾಣ್, ಖಜಾಂಚಿ ವಸಂತಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.