ADVERTISEMENT

ಹೋರಾಟಕ್ಕಿಂತಲೂ ಜಾಗೃತಿ ಮುಖ್ಯ: ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 16:31 IST
Last Updated 11 ಜನವರಿ 2021, 16:31 IST
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್‌) ಸೋಮವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಎಚ್‌ಎಸ್‌ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮತ್ತು ನಿವೃತ್ತ ನ್ಯಾಯಮೂರ್ತಿ ಡಾ.ಎಚ್‌.ಎನ್‌. ನಾಗಮೋಹನದಾಸ್‌ ಅವರು ಚರ್ಚೆಯಲ್ಲಿ ನಿರತರಾಗಿದ್ದ ದೃಶ್ಯ. ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಮಾಳಮ್ಮ, ರಾಜ್ಯ ಸರ್ಕಾರಿ ಎಸ್‌.ಸಿ. ಮತ್ತು ಎಸ್‌.ಟಿ. ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್‌ ಹಾಗೂ ಸಹಾಯಕ ಪ್ರಾಧ್ಯಾಪಕ ಆರ್‌.ವಿ. ಚಂದ್ರಶೇಖರ್‌ ಇದ್ದರು–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳು ಅರ್ಹರಿಗೆ ತಲುಪುವಂತೆ ಜಾಗೃತಿ ಮೂಡಿಸಬೇಕಾದುದು ಈ ವರ್ಗದ ಜನರ ಪರವಾಗಿ ಹೋರಾಡುವ ಸಂಘಟನೆಗಳ ಜವಾಬ್ದಾರಿ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಹೇಳಿದರು.

ದಲಿತರಿಗೆ ಭೂ ಒಡೆತನ, ಕೊಳವೆ ಬಾವಿ, ಸ್ಮಶಾನ, ಉದ್ಯೋಗ ಮತ್ತು ಇತರ ನೆರವಿನ ಯೋಜನೆಗಳ ಜಾರಿಗೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ನಗರದ ಗಾಂಧಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ಅವುಗಳ ಅನುಷ್ಠಾನದಲ್ಲಿ ಲೋಪವಾಗಿದೆ. ಅನುದಾನ ದುರ್ಬಳಕೆಯಾಗಿದೆ ಎಂದು ಹೋರಾಡುವುದಕ್ಕಿಂತಲೂ ಜನರಲ್ಲಿ ಜಾಗೃತಿ ಮೂಡಿಸಿ, ಅರ್ಹರಿಗೆ ಯೋಜನೆಗಳನ್ನು ತಲುಪಿಸುವುದೇ ರಚನಾತ್ಮಕವಾದ ಹೋರಾಟ’ ಎಂದರು.

ADVERTISEMENT

ಗ್ರಾಮಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಬೇಕು. ಯೋಜನೆಗಳ ದುರ್ಬಳಕೆ, ಭ್ರಷ್ಟಾಚಾರದ ವಿರುದ್ಧವೂ ನಿಗಾ ಇಡಬೇಕು. ಅನುದಾನ ದುರ್ಬಳಕೆ ಆಗಿರುವುದು ಕಂಡುಬಂದಲ್ಲಿ ಕಾನೂನು ಹೋರಾಟ ನಡೆಸಬೇಕು. ಯೋಜನೆಯ ಅನುಷ್ಠಾನದಲ್ಲೂ ಸಂಘಟನೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಇದ್ದರೆ ಮಾತ್ರ ಯಶಸ್ಸು ದೊರಕಲು ಸಾಧ್ಯ ಎಂದೂ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಶೇಕಡಾವಾರು ಪ್ರಮಾಣಕ್ಕೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಕಾಯ್ದೆ ಜಾರಿಯಲ್ಲಿದೆ. ಆದರೆ, ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಇದನ್ನು ತಡೆಯಲೂ ಸಂಘಟನೆಗಳು ಹೋರಾಟ ನಡೆಸಬೇಕಿದೆ ಎಂದು ಸಲಹೆ ನೀಡಿದರು.

ದಲಿತರಲ್ಲಿ ಜಮೀನಿನ ಒಡೆತನ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ನೀತಿಯಲ್ಲಿ ಬದಲಾವಣೆ ಆಗಿದ್ದು, ಈ ಜಾತಿ, ಪಂಗಡಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ದುಸ್ತರವಾಗುತ್ತಿದೆ ಎಂದರು.

ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರಾದ ರಾಜಶೇಖರಮೂರ್ತಿ, ಗೋಪಾಲಕೃಷ್ಣ ಅರಳಹಳ್ಳಿ, ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಮಾಳಮ್ಮ, ರಾಜ್ಯ ಸರ್ಕಾರದ ಎಸ್‌.ಸಿ., ಎಸ್‌.ಟಿ. ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್‌, ಸಹಾಯಕ ಪ್ರಾಧ್ಯಾಪಕ ಆರ್‌.ವಿ. ಚಂದ್ರಶೇಖರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.