ADVERTISEMENT

ಮಲ್ಲೇಶ್ವರ: ಡಿಸಿಎಂರಿಂದ ಶ್ರೀರಾಮನಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 10:34 IST
Last Updated 5 ಆಗಸ್ಟ್ 2020, 10:34 IST
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಭಾಗವಹಿಸಿದ್ದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಭಾಗವಹಿಸಿದ್ದರು.   

ಬೆಂಗಳೂರು: ಅತ್ತ ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದ್ದರೆ ಇತ್ತ ಮಲ್ಲೇಶ್ವರದ ಪ್ರಸಿದ್ಧ ರಾಮಮಂದಿರದಲ್ಲಿ ವಿಶೇಷ ಪೂಜಾ ಸಂಭ್ರಮ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಪೂಜಾ ಕೈಂಕಾರ್ಯದಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಭಾಗವಹಿಸಿ, ಖುಷಿಪಟ್ಟರು.

ಪೂಜೆ ಬಳಿಕ ಅಲ್ಲಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿ ನೂರಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಿವಾದಕ್ಕೆ ತೆರೆ ಎಳೆದಿದ್ದಕ್ಕೆ ಧನ್ಯತಾಭಾವ ಪ್ರದರ್ಶಿಸಿದರು. ರಾಮನ ಜನ್ಮಭೂಮಿಯಲ್ಲೇ ಮಂದಿರ ನಿರ್ಮಾಣವಾಗಬೇಕು ಎನ್ನುವ ಪ್ರತಿಯೊಬ್ಬ ಭಾರತೀಯನ ಕನಸು ನನಸಾಗಿದ್ದು ನಿಜಕ್ಕೂ ಸಂತಸದ ವಿಚಾರ ಎಂದು ಡಾ.ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ಹೇಳಿದರು.

ADVERTISEMENT

500 ವರ್ಷಗಳಿಂದ ನಡೆಯುತ್ತಿದ್ದ ಸಾತ್ವಿಕ ಸಂಘರ್ಷ ಮತ್ತು 134 ವರ್ಷಗಳ ಕಾನೂನು ಹೋರಾಟದ ಬಳಿಕ ಮಂದಿರ‌ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ. ಇವತ್ತಿನ ಈ ಕ್ಷಣಕ್ಕಾಗಿ ಸಂಕಲ್ಪ, ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲ ಶ್ರದ್ಧಾಳುಗಳಿಗೂ ನನ್ನ ನಮನಗಳು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಸರ್ವಧರ್ಮಿಯರ ಬೆಂಬಲದೊಂದಿಗೆ ನಡೆಯುತ್ತಿರುವ ಈ ಕಾರ್ಯವನ್ನು ಭಾರತದ ಭಾವೈಕ್ಯತೆಯ ಸಂಕೇತ ಎಂದೇ ಹೇಳಬಹುದು. ಶಾಂತಿಯ ನಾಡಿನಲ್ಲಿ ಸಂಭ್ರಮ ಮನೆ ಮಾಡಲಿದೆ. ಎಲ್ಲ ಸಂಕಷ್ಟಗಳೂ ದೂರವಾಗಲಿವೆ. ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದುಕೊಂಡ ರೀತಿ ಇಡೀ ನಾಡು ಮೆಚ್ಚುವಂತಹದ್ದು ಎಂದು ಅವರು ಹೇಳಿದರು.

ರಾಯರ ದರ್ಶನ:ರಾಮನ ಪೂಜೆ ಬಳಿಕ ಗುರು ರಾಘವೇಂದ್ರರ ಆರಾಧನೆ ಪ್ರಯುಕ್ತ ಹಲವು ಮಠಗಳಿಗೆ ಉಪ ಮುಖ್ಯಮಂತ್ರಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಲ್ಲೇಶ್ವರದ ೮ನೇ ಅಡ್ಡರಸ್ತೆ, ೪ನೇ ಅಡ್ಡರಸ್ತೆ, ಸಂಪಿಗೆ ರಸ್ತೆಯ ಪಲಿಮಾರುಮಠ, ಶೇಷಾಧಿಪುರದಲ್ಲಿನ ರಾಘವೇಂದ್ರ ಮಠಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.