ADVERTISEMENT

ಮಹಡಿಯಿಂದ ಜಿಗಿದು ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 5:46 IST
Last Updated 6 ಮಾರ್ಚ್ 2022, 5:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜೀವನ್‌ಭಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಪೇಯಿಂಗ್ ಗೆಸ್ಟ್ ಕಟ್ಟಡವೊಂದರ ಐದನೇ ಮಹಡಿಯಿಂದ ಬಿದ್ದು ಭವ್ಯಾ (19) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

'ಮುಳಬಾಗಿಲಿನ ಭವ್ಯಾ, ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಕೋರ್ಸ್‌ನ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಮರಜ್ಯೋತಿ ನಗರದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದ ಅವರು, ಅಲ್ಲಿಂದಲೇ ಕಾಲೇಜಿಗೆ ಹೋಗಿ ಬರುತ್ತಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದರು.

‘ಪೇಯಿಂಗ್ ಗೆಸ್ಟ್ ಕಟ್ಟಡದ ಐದನೇ ಮಹಡಿಗೆ ಶುಕ್ರವಾರ ಸಂಜೆ ಹೋಗಿದ್ದ ಭವ್ಯಾ, ಅಲ್ಲಿಂದಲೇ ಜಿಗಿದಿದ್ದರು. ನೆಲಮಹಡಿಗೆ ಬಿದ್ದು ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ನೇಹಿತೆಯರ ಹೇಳಿಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಮಗಳ ಆತ್ಮಹತ್ಯೆ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಜೀವನ್‌ಭಿಮಾನಗರ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಜ್ಯೋತಿ ನಿವಾಸ್ ಕಾಲೇಜಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.

‘ಬಿ.ಕಾಂ ಪದವಿಯ ಮೊದಲ ವರ್ಷದ ಪರೀಕ್ಷೆ ಬರೆಯಲು ಮಗಳು ಕಾಲೇಜಿಗೆ ಹೋಗಿದ್ದಳು. ನಕಲು ಮಾಡಿದರೆಂಬ ಕಾರಣಕ್ಕೆ ಮಗಳನ್ನು ಕಾಲೇಜಿನ ಆಡಳಿತ ಮಂಡಳಿ ಡಿಬಾರ್ ಮಾಡಿದೆ. ಇದರಿಂದ ನೊಂದಿದ್ದ ಮಗಳು, ಪೇಯಿಂಗ್‌ ಗೆಸ್ಟ್‌ ಕಟ್ಟಡಕ್ಕೆ ಮರಳಿದ ಬಳಿಕ ನಮಗೆ ಕರೆ ಮಾಡಿದ್ದಳು. ‘ನನ್ನನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದಾರೆ. ನಿಮ್ಮ ಗೌರವಕ್ಕೆ ಧಕ್ಕೆ ತಂದಿದ್ದೇನೆ. ನನಗೆ ಬದುಕು ಇಷ್ಟವಿಲ್ಲ ಎಂದು ಹೇಳಿ ಕರೆ ಕಡಿತಗೊಳಿಸಿದ್ದಳು. ಮತ್ತೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಗಾಬರಿಯಾಗಿ, ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಬಂದಿದ್ದೆವು. ಅಷ್ಟರಲ್ಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದಾಗಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಿದ ಆರೋಪ ತಳ್ಳಿ ಹಾಕಿರುವ ಜ್ಯೋತಿ ನಿವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎಸ್. ವಾಸುದೇವಮೂರ್ತಿ, ‘ನಮ್ಮ ಕಾಲೇಜಿನಲ್ಲಿ ಯಾವುದೇ ವಿದ್ಯಾರ್ಥಿಯನ್ನು ಡಿಬಾರ್ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು.

‘ನಕಲು ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ ಭವ್ಯಾ ಅವರಿಗೆ ಬುದ್ಧಿವಾದ ಹೇಳಲಾಗಿತ್ತು. ತಂದೆ–ತಾಯಿಗೆ ಹೇಳಬೇಕಾ ಎಂದು ಕೇಳಿದಾಗ, ಬೇಡವೆಂದು ಭವ್ಯಾ ಕೋರಿದರು. ಮುಂದಿನ ವರ್ಷ ಪರೀಕ್ಷೆ ಬರೆಯುವಂತೆ ತಿಳಿ ಹೇಳಿ ಕಾಲೇಜಿನಿಂದ ಅವರನ್ನು ಕಳುಹಿಸಲಾಗಿತ್ತು. ಡಿಬಾರ್ ಮಾಡಿಲ್ಲ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖದ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.