ADVERTISEMENT

ಶೇ 25ರಷ್ಟು ಹಣ ಕುಡಿವ ನೀರಿಗಾಗಿ ಬಳಕೆ

ಪ್ರದೇಶಾಭಿವೃದ್ಧಿ ನಿಧಿ ಬಳಕೆ : ಸದಾನಂದ ಗೌಡ ಮುಂದೆ : ಅನಂತ್‌ ಕುಮಾರ್‌ ಹಿಂದೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 20:12 IST
Last Updated 4 ಏಪ್ರಿಲ್ 2019, 20:12 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಬೆಂಗಳೂರು: ರಾಜಧಾನಿ ಕೇಂದ್ರ ಬೆಂಗಳೂರನ್ನು ಪ್ರತಿನಿಧಿಸುವ ಮೂವರು ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂ.ಪಿ.ಲ್ಯಾಡ್ಸ್‌) ಶೇ 25ರಷ್ಟು ಅನುದಾನವನ್ನು ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿಯೇ ಬಳಸಿದ್ದಾರೆ.

ಅನುದಾನ ಬಳಕೆಯಲ್ಲಿ ನಂತರ ಆದ್ಯತೆ ಸಿಕ್ಕಿದ್ದು ರಸ್ತೆ, ಚರಂಡಿ ನಿರ್ಮಾಣಕ್ಕೆ. ಸಮುದಾಯ ಭವನ ನಿರ್ಮಾಣ, ಸಿಸಿಟಿವಿ ಕ್ಯಾಮೆರಾ ಮತ್ತು ಬೀದಿದೀಪಗಳ ಅಳವಡಿಕೆಯಂತಹ ಸಾರ್ವಜನಿಕ ಸೌಲಭ್ಯಗಳಿಗೆ ಮೂರನೆ ಪ್ರಾಶಸ್ತ್ಯ ನೀಡಲಾಗಿದೆ.

ಬೆಂಗಳೂರಿನ ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ 2014–15ನೇ ಸಾಲಿನಿಂದ 2017–18ನೇ ಸಾಲಿನ ವರೆಗಿನ (4 ಆರ್ಥಿಕ ವರ್ಷ) ಅನುದಾನ ಬಳಕೆ ವಿವರಗಳನ್ನು ಪರಿಶೀಲಿಸಿ ‘ಬೆಂಗಳೂರು ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ’(ಬಿ–ಪ್ಯಾಕ್‌) ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶಗಳಿವೆ. ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಯಿತು.

ADVERTISEMENT

ಸಂಸದರೊಬ್ಬರಿಗೆ ಪ್ರತಿವರ್ಷ ಎಂ.ಪಿ.ಲ್ಯಾಡ್ಸ್‌ಯಡಿ ₹ 5 ಕೋಟಿ ಅನುದಾನ ಬರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಗೂ ಅನುದಾನ ನೀಡಿದ ಡಿ.ವಿ.ಎಸ್‌

ಡಿ.ವಿ.ಸದಾನಂದಗೌಡ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾವೂರಿನ ದೋಟದ ಗುಡ್ಡದಲ್ಲಿರುವ (ಮಂಗಳೂರು ಸಮೀಪ) ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶಾಲಾ ಆವರಣದ ತಡೆಗೋಡೆ ನಿರ್ಮಾಣಕ್ಕೆತಮ್ಮ ಎಂ.ಪಿ.ಲ್ಯಾಡ್ಸ್‌ ಅಡಿ ₹ 5 ಲಕ್ಷ ಅನುದಾನ ನೀಡಿದ್ದಾರೆ.

ಸುಳ್ಯ ತಾಲ್ಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನ ಗೌಡ ಯುವಸೇವಾ ಸಂಘ ನಿರ್ಮಿಸುತ್ತಿರುವ ಗೌಡ ಸಮುದಾಯ ಭವನಕ್ಕೆ ₹ 5 ಲಕ್ಷ ಅನುದಾನ ನೀಡಿದ್ದಾರೆ.

‘ಸಂಸದರೊಬ್ಬರು 5 ವರ್ಷಗಳ ಅಧಿಕಾರ ಅವಧಿಯಲ್ಲಿ ಗರಿಷ್ಠ ₹ 25 ಲಕ್ಷಗಳ ವರೆಗಿನ ಅನುದಾನವನ್ನು ಅನ್ಯ ಲೋಕಸಭಾ ಕ್ಷೇತ್ರದ ಪ್ರದೇಶದಲ್ಲಿನ ಅಭಿವೃದ್ಧಿ ಕಾಮಗಾರಿಗೆ ನೀಡುವುದಕ್ಕೆ ಅವಕಾಶ ಇದೆ’ ಎಂದು ಬೆಂಗಳೂರು ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು.

ಎಲೆಕ್ಷನ್‌ ಹಬ್ಬ: ಇಂದು ಸಂವಾದ

ಬಿ–ಪ್ಯಾಕ್‌ ಸಂಸ್ಥೆಯು ಲೋಕಸಭಾ ಚುನಾವಣೆ ಪ್ರಯುಕ್ತ ‘ಎಲೆಕ್ಷನ್‌ ಹಬ್ಬ’ ಎಂಬ ವಿಶೇಷ ಅಭಿಯಾನ ಆರಂಭಿಸಿದೆ. ಅದರ ಭಾಗವಾಗಿ ಏಪ್ರಿಲ್‌ 5 ರಂದು ‘ಮತದಾನ ಹೆಚ್ಚಳಕ್ಕೆ ಭಾರತೀಯ ಚುನಾವಣಾ ಆಯೋಗದ ಹೊಸ ಪ್ರಯೋಗಗಳು’ ಎಂಬ ಸಂವಾದ ಕಾರ್ಯಕ್ರಮ ಆಯೋಜಿಸಿದೆ.

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್, ಜೈನ್‌ ವಿಶ್ವವಿದ್ಯಾಲಯದ ಕುಲಪತಿ ಸಂದೀಪ್‌ ಶಾಸ್ತ್ರಿ, ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ದಕ್ಷ್‌ ಇಂಡಿಯಾ ಸಹ–ಸ್ಥಾಪಕ ಹರೀಶ್‌ ನರಸಪ್ಪ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಸಮಯ: ಸಂಜೆ 5.30

ವಿಳಾಸ: ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.