ಬೆಂಗಳೂರು: ಮೂಲಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒದಗಿಸಲಿರುವ ₹7 ಸಾವಿರ ಕೋಟಿ ಅನುದಾನದಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ವಿಶೇಷ ಉದ್ದೇಶದ ಸಂಸ್ಥೆ (ಎಸ್‌ಪಿವಿ)– ‘ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ’ (ಬಿ–ಸ್ಮೈಲ್) ಅನ್ನು ಸ್ಥಾಪಿಸಲಾಗಿದೆ.
ಬಿಬಿಎಂಪಿಯಿಂದ ಪ್ರಧಾನ ಎಂಜಿನಿಯರ್ ಹಾಗೂ ಮುಖ್ಯ ಎಂಜಿನಿಯರ್‌ಗಳನ್ನು ‘ಬಿ–ಸ್ಮೈಲ್’ ಸಂಸ್ಥೆಗೆ ನಿಯೋಜಿಸಲಾಗಿದ್ದು, ಅದಕ್ಕಾಗಿ ಹುದ್ದೆಗಳನ್ನು ಮರುಸೃಜನೆ ಹಾಗೂ ವಿಲೀನ ಮಾಡಲಾಗಿದೆ.
‘ಬಿ–ಸ್ಮೈಲ್’ ಹೆಸರು ಈಗಾಗಲೇ ನೋಂದಣಿಯಾಗಿದ್ದು, ಸಂಸ್ಥೆಯನ್ನು ನೋಂದಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಸಂಸ್ಥೆಯ ಮೂಲಕ ನಗರದಲ್ಲಿ ಸುರಂಗ ರಸ್ತೆ, ಮೇಲ್ಸೇತುವೆಗಳು, ಸ್ಕೈಡೆಕ್, ವೈಟ್ ಟಾಪಿಂಗ್, ಬಫರ್ ರಸ್ತೆಗಳು ಸೇರಿದಂತೆ ದೀರ್ಘಾವಧಿಯ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಬೃಹತ್ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಿರುವುದರಿಂದ, ಅಗತ್ಯ ಮಾನವ ಸಂಪನ್ಮೂಲ ಒದಗಿಸಿಕೊಂಡು ಕಚೇರಿಯನ್ನು ಪ್ರಾರಂಭಿಸಬೇಕಿದೆ. ಅಲ್ಲದೆ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ಬಂದಿರುವುದರಿಂದ ನಾಲ್ಕು ತಿಂಗಳೊಳಗೆ ಬಿಬಿಎಂಪಿಯನ್ನು ವಿಂಗಡಿಸಿ ಹೊಸ ನಗರ ಪಾಲಿಕೆಗಳನ್ನು ರಚಿಸಬೇಕಿದೆ. ಆದ್ದರಿಂದ ಬಿಬಿಎಂಪಿಯ ಪ್ರಧಾನ ಎಂಜಿನಿಯರ್ ಹುದ್ದೆಯನ್ನು ‘ಬಿ–ಸ್ಮೈಲ್’ಗೆ ಪೂರ್ಣಕಾಲಿಕವಾಗಿ ವಿಲೀನಗೊಳಿಸಿ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ಬಿಬಿಎಂಪಿಯ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರನ್ನು ‘ಬಿ–ಸ್ಮೈಲ್’ನ ತಾಂತ್ರಿಕ ನಿರ್ದೇಶಕರಾಗಿ ನೇಮಿಸಲಾಗಿದೆ.
ಬಿಬಿಎಂಪಿಯನ್ನು ವಿಂಗಡಿಸಿ ಹೊಸ ನಗರ ಪಾಲಿಕೆಗಳನ್ನು ಸೃಜಿಸುವುದರಿಂದ, ಪಾಲಿಕೆಯ ಹುದ್ದೆಗಳು ಮತ್ತು ಪ್ರಕಾರ್ಯಗಳನ್ನು ಪರಿಷ್ಕರಿಸಲಾಗಿದೆ. ಹೀಗಾಗಿ, ಬಿಬಿಎಂಪಿಯ ಯೋಜನೆ– ಕೇಂದ್ರ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಯನ್ನು ವಿಭಜಿಸಲಾಗಿದೆ.
ಯೋಜನೆ–ಕೇಂದ್ರ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಯನ್ನು ಕಟ್ಟಡ ಮತ್ತು ಸಂರಚನೆಗಳಿಗೆ ಸಂಬಂಧಿಸಿದ ಪ್ರಕಾರ್ಯಗಳನ್ನು ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಗೆ ವಿಲೀನಗೊಳಿಸಲಾಗಿದೆ.
ವೈಟ್ ಟಾಪಿಂಗ್, ಮೇಲ್ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಕಾರ್ಯಗಳನ್ನು ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಗೆ ವಿಲೀನಗೊಳಿಸಲಾಗಿದೆ. ಈ ಹುದ್ದೆಯನ್ನು ‘ಬಿ–ಸ್ಮೈಲ್’ ಸಂಸ್ಥೆಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ.
ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರನ್ನು ‘ಬಿ–ಸ್ಮೈಲ್’ಗೆ ಪೂರ್ಣಾವಧಿಗೆ ನೇಮಿಸಿರುವುದರಿಂದ, ಬಿಬಿಎಂಪಿಯ ರಸ್ತೆ ಮೂಲಸೌಕರ್ಯ, ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಸರ್ಕಾರ ನೇಮಕ ಮಾಡುವವರೆಗೂ, ಪ್ರಭಾರಿಗಳನ್ನು ನೇಮಿಸಿಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ.
ಕೂಡಲೇ ಕಚೇರಿ– ಪ್ರಹ್ಲಾದ್
‘ಸರ್ಕಾರದ ಅನುದಾನದಲ್ಲಿ ಬೃಹತ್ ಕಾಮಗಾರಿಗಳನ್ನು ಆರಂಭಿಸಬೇಕಿದೆ. ‘ಬಿ–ಸ್ಮೈಲ್’ ಕಚೇರಿಯನ್ನು ಕೂಡಲೇ ಸ್ಥಾಪಿಸಬೇಕಿದ್ದು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಅಥವಾ ಕೇಂದ್ರ ಭಾಗದ ಪ್ರಮುಖ ಸ್ಥಳದಲ್ಲಿ ಕಚೇರಿಯನ್ನು ಪ್ರಾರಂಭಿಸಲಾಗುತ್ತದೆ’ ಎಂದು ‘ಬಿ–ಸ್ಮೈಲ್’ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.
₹750 ಕೋಟಿ ಬಿಡುಗಡೆ
ರಾಜ್ಯ ಸರ್ಕಾರ ‘ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ’ ಯೋಜನೆಯಡಿ 2025–26ನೇ ಸಾಲಿನ ಮೊದಲ ಕಂತಿನ ₹750 ಕೋಟಿ ಅನುದಾನವನ್ನು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಮೇ 20ರಂದು ಬಿಡುಗಡೆ ಮಾಡಿದೆ. ವಿಶೇಷ ಮೂಲಸೌಕರ್ಯ ಯೋಜನೆಯಡಿ ಬೃಹತ್ ರಸ್ತೆಗಳು ಮೇಲ್ಸೇತುವೆ ಕಾರಿಡಾರ್ ಮುಂತಾದ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಬಿಲ್ ಬಾಕಿ ಇದ್ದು ಅವುಗಳನ್ನು ಪಾವತಿಸದಿದ್ದರೆ ಪ್ರಗತಿ ಕುಂಠಿತವಾಗುವ ಸಂಭವವಿರುತ್ತದೆ. ಹೀಗಾಗಿ 2025–26ನೇ ಸಾಲಿನಲ್ಲಿ ನಿಗದಿಪಡಿಸಲಾಗಿರುವ ₹3 ಸಾವಿರ ಕೋಟಿ ಅನುದಾನದಲ್ಲಿ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.