ADVERTISEMENT

ಬಿಎಸಿ ಕಗ್ಗಂಟು: ಇಂದು ಇತ್ಯರ್ಥ:

ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ: ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 19:30 IST
Last Updated 31 ಜನವರಿ 2021, 19:30 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆ (ಬಿಎಸಿ) ಸೋಮವಾರ ಬೆಳಿಗ್ಗೆ ನಿಗದಿಯಾಗಿದ್ದು, ಅದನ್ನು ಬಹಿಷ್ಕರಿಸುವ ನಿಲುವನ್ನು ಕಾಂಗ್ರೆಸ್‌ ಪಕ್ಷ ಸಡಿಲಿಸಿದೆ.

ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಬಹಿಷ್ಕಾರದ ನಿಲುವು ಕೈಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಕರೆದಿದ್ದ ಸಭೆಗೆ ಕಾಂಗ್ರೆಸ್ ಬಹಿಷ್ಕಾರ ಹಾಕಿತ್ತು. ಹೀಗಾಗಿ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಕಲಾಪದ ಸಂದರ್ಭ ಯಾವೆಲ್ಲ ವಿಷಯಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳು ಒಮ್ಮತದ ತೀರ್ಮಾನ ತೆಗೆದುಕೊಳ್ಳುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಹಲವು ಕಗ್ಗಂಟಿನ ವಿಷಯಗಳನ್ನು ಪರಸ್ಪರ
ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ.

ADVERTISEMENT

ಕಳೆದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ತಮ್ಮ ಗಮನಕ್ಕೆ ತರದೇ ಸದನದಲ್ಲಿ ಮಂಡಿಸಲಾಯಿತು ಎಂಬುದು ಕಾಂಗ್ರೆಸ್‌ ಸಿಟ್ಟಿಗೆ ಕಾರಣ. ಈ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಕಲಾಪ ಸಮಿತಿ ಸಭೆಯನ್ನು ಬಹಿಷ್ಕರಿಸಿದೆ. ಆದರೆ, ಮಹತ್ವದ ಮಸೂದೆ ಮಂಡಿಸುವುದಾಗಿ ಕಲಾಪ ಸಮಿತಿ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ತಿಳಿಸಲಾಗಿತ್ತು ಎಂಬುದು ಬಿಜೆಪಿಯ ವಾದ.

ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಸಿದ್ಧ

‘ವಿರೋಧ ಪಕ್ಷದವರು ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲಿ. ಅದನ್ನು ಸ್ವಾಗತಿಸುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಸಿದ್ಧ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾನುವಾರ ತಿಳಿಸಿದ್ದಾರೆ.

ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತೇವೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

‘ವಿರೋಧ ಪಕ್ಷದ ನಾಯಕರಾಗಿ ಅವರ ಕೆಲಸ ಮಾಡುತ್ತಾರೆ. ನಾಳೆ ಬಿಎಸಿ ಸಭೆಯಲ್ಲಿ ಚರ್ಚೆ ನಡೆಸಲಿ. ವಿರೋಧ ಪಕ್ಷದವರು ಯಾವುದೇ ಟೀಕೆ– ಟಿಪ್ಪಣಿಗಳನ್ನು ಮಾಡಿದರೂ ಸ್ವಾಗತಿಸುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ನಮ್ಮಿಂದ ತಪ್ಪಾಗಿಲ್ಲ. ಅವರು ತಪ್ಪು ಗ್ರಹಿಕೆ ಮಾಡಿಕೊಂಡಿರಬಹುದು. ಅದನ್ನು ಅವರಿಗೆ ತಿಳಿಸುತ್ತೇವೆ’ ಎಂದರು.

ಸಭಾಪತಿ ರಾಜೀನಾಮೆ: ಇಂದು ನಿರ್ಧಾರ

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಸೋಮವಾರ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ನೋಟಿಸ್ ನೀಡಿದ್ದರು. ಸಭಾಪತಿ ಅದನ್ನು ತಿರಸ್ಕರಿಸಿದ್ದರು. ಈಗ ಮತ್ತೊಮ್ಮೆ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿದ್ದಾರೆ. ಫೆ. 5 ರವರೆಗೂ ಅಧಿವೇಶನ ನಡೆಯಲಿದ್ದು, ಅವಿಶ್ವಾಸ ನಿರ್ಣಯದ ನೋಟಿಸ್‌ ಕುರಿತು ಈ ಅಧಿವೇಶನದ ಕೊನೆಯ ದಿನದೊಳಗೆ ಸಭಾಪತಿ ನಿರ್ಧಾರ ಪ್ರಕಟಿಸಬೇಕಿದೆ.

ಸೋಮವಾರ ಅಥವಾ ಮಂಗಳವಾರ ರಾಜೀನಾಮೆ ಸಲ್ಲಿಸಲು ಪ್ರತಾಪಚಂದ್ರ ಶೆಟ್ಟಿ ಚಿಂತನೆ ನಡೆಸಿದ್ದಾರೆ. ಆದರೆ, ಅಧಿವೇಶನದ ಕೊನೆಯ ದಿನವೇ ರಾಜೀನಾಮೆ ನೀಡುವಂತೆ ಅವರಿಗೆ ಕೆಲವರು ಸಲಹೆ ಮಾಡಿದ್ದಾರೆ. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಸೋಮವಾರ ಉಡುಪಿಯಿಂದ ಹಿಂದಿರುಗಿದ ಬಳಿಕ ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌–ಜೆಡಿಎಸ್‌ ಪ‍ಕ್ಷಗಳ ಸದಸ್ಯರ ಬೆಂಬಲದೊಂದಿಗೆ 2018ರ ಡಿಸೆಂಬರ್‌ನಲ್ಲಿ ಪ್ರತಾಪಚಂದ್ರ ಶೆಟ್ಟಿ ಸಭಾಪತಿ ಹುದ್ದೆಗೇರಿದ್ದರು. ಈಗ ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಹುದ್ದೆ ಪಡೆಯಲು ಜೆಡಿಎಸ್‌ ನಿರ್ಧರಿಸಿದೆ. ಇದಕ್ಕಾಗಿ ಜನವರಿ 29ರಂದು ನಡೆದ ಉಪ ಸಭಾಪತಿ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಅವರಿಗೆ ಜೆಡಿಎಸ್‌ ಸದಸ್ಯರು ಬೆಂಬಲ ಸೂಚಿಸಿದ್ದರು.

ಜೆಡಿಎಸ್‌ ಸದಸ್ಯರು ಬಿಜೆಪಿ ಜತೆ ಕೈಜೋಡಿಸಿರುವುದರಿಂದ ಸಭಾಪತಿ ಬಹುಮತ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಹುದ್ದೆಯಲ್ಲಿ ಮುಂದುವರಿಯದೇ ಇರಲು ಪ್ರತಾಪಚಂದ್ರ ಶೆಟ್ಟಿ ನಿರ್ಧರಿಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ರಾಜೀನಾಮೆ ಸಲ್ಲಿಸಿದರೆ ಈ ಅಧಿವೇಶನದಲ್ಲೇ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರತಾಪಚಂದ್ರ ಶೆಟ್ಟಿ ಅವರು ಫೆ.5ರಂದು ರಾಜೀನಾಮೆ ಸಲ್ಲಿಸಿದಲ್ಲಿ ಬಜೆಟ್‌ ಅಧಿವೇಶನದಲ್ಲೇ ನೂತನ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.

ಸಭಾಪತಿ ರಾಜೀನಾಮೆ ನೀಡಲು ನಿರ್ಧರಿಸಿರುವುದರಿಂದ ಸರ್ಕಾರಿ ವಾಹನ ಬಳಸುತ್ತಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.