ADVERTISEMENT

ಹಿಂದುಳಿದ ವರ್ಗಗಳ ಇಲಾಖೆ: ಬಡ್ತಿ ಗಡಿಬಿಡಿ

ಪರಿಶಿಷ್ಟರಿಗೆ ಅನ್ಯಾಯ: ಆರೋಪ l ಸದನ ಸಮಿತಿಗೆ ದೂರು ನೀಡಿದ ನೌಕರರು

​ಪ್ರಜಾವಾಣಿ ವಾರ್ತೆ
Published 18 ಮೇ 2020, 20:55 IST
Last Updated 18 ಮೇ 2020, 20:55 IST

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮುಂಬಡ್ತಿ ನೀಡುವ ವೇಳೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಮಂಡಲದ ಪರಿಶಿಷ್ಟ ಜಾತಿಗಳ ಹಾಗೂ ಪರಿಶಿಷ್ಟ ಪಂಗಡಗಳ ಸಮಿತಿಗೆ ಕೆಲವು ನೌಕರರು ದೂರು ನೀಡಿದ್ದಾರೆ.

‘ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ‍ಪ್ರಥಮ ದರ್ಜೆ ಸಹಾಯಕರಿಗೆ ಕಚೇರಿ ಮೇಲ್ವಿಚಾರಕರು ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡಬೇಕಿದೆ. ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಮುಂಬಡ್ತಿಗೆ ಕನಿಷ್ಠ ಸೇವಾವಧಿ ಹಿಂದೆ 3 ವರ್ಷ ಇತ್ತು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ ಕನಿಷ್ಠ ಸೇವಾವಧಿಯನ್ನು 5 ವರ್ಷಕ್ಕೆ ನಿಗದಿ ಮಾಡಲಾಗಿದೆ. ಬಡ್ತಿ ನಿರೀಕ್ಷೆಯಲ್ಲಿರುವ ಪ್ರಥಮ ದರ್ಜೆ ಸಹಾಯಕರು 15 ವರ್ಷಕ್ಕೂ ಹೆಚ್ಚು ಅವಧಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡಿ ಬಡ್ತಿ ಪಡೆದಿದ್ದಾರೆ. ಹೊಸ ವೃಂದ ಮತ್ತು ನೇಮಕಾತಿ ಅನ್ವಯ 5 ವರ್ಷ ನಿಗದಿ ಪಡಿಸಿರುವುದರಿಂದ ನಮಗೆ ಅನ್ಯಾಯವಾಗಿದೆ‘ ಎಂದು ಈ ಸಮುದಾಯದ ನೌಕರರು ಆಪಾದಿಸಿದ್ದಾರೆ.

‘ಹೊಸ ನಿಯಮದ ಅನ್ವಯ ನೇಮಕಾತಿ ಅಧಿಸೂಚನೆ ಹೊರಡಿಸುವ ಮುನ್ನ ಇಲಾಖೆಯಲ್ಲಿ ಖಾಲಿ ಇರುವ 200 ಮೇಲ್ವಿಚಾರಕ/ ವಿಸ್ತರಣಾಧಿಕಾರಿ ಹುದ್ದೆಗಳ ಪೈಕಿ ಪ್ರಥಮ ದರ್ಜೆ ಸಹಾಯಕ ವೃಂದಕ್ಕೆ ನಿಗದಿಪಡಿಸಿರುವ ಅನುಪಾತದಂತೆ ಮುಂಬಡ್ತಿ ನೀಡ
ಬೇಕು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ ತೀರ್ಪು ನೀಡಿದೆ. ಅದನ್ನು ಪಾಲಿಸದೇ ಅನ್ಯಾಯ ಮಾಡಲಾಗುತ್ತಿದೆ‘ ಎಂದು ಅವರು ದೂರಿದ್ದಾರೆ.

ADVERTISEMENT

’ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 24 ಪ್ರಥಮದರ್ಜೆ ಸಹಾಯಕರಿಗೆ ಬಡ್ತಿ ನೀಡಬೇಕಿತ್ತು. ಅವರಿಗೆ ಬಡ್ತಿ ನೀಡುವುದನ್ನು ತಪ್ಪಿಸಲು ಕೆಲವು ಹಿರಿಯ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ. ಇದಕ್ಕಾಗಿ ತುರ್ತಾಗಿ ಇಲಾಖಾ ಪದೋನ್ನತಿ ಸಭೆ (ಡಿಪಿಸಿ) ಕರೆದಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

’ಮಂಗಳವಾರವೇ ಇಲಾಖಾ ಪದೋನ್ನತಿ ಸಭೆ ನಡೆಯಲಿದೆ. ತರಾತುರಿಯಲ್ಲಿ ಸಭೆ ನಿಗದಿಪಡಿಸಿ, ತಮಗೆ ಬೇಕಾದವರಿಗೆ ಬಡ್ತಿ ನೀಡಲು ಮುಂದಾಗಿಸದ್ದಾರೆ‘ ಎಂದೂ ಅವರು ದೂರಿದ್ದಾರೆ.

ಇಲಾಖಾ ಪದೋನ್ನತಿ ಸಭೆಯನ್ನು ರದ್ದು‍‍ಪಡಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ನೌಕರರಿಗೆ ಬಡ್ತಿ ನೀಡಬೇಕು ಎಂದು ಅವರು ಕೋರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಕರೆ ಮಾಡಿದಾಗ, ‘ಮಾಹಿತಿ ಪಡೆದು ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಇಲಾಖೆಯ ಆಯುಕ್ತ ಟಿ.ಎಚ್‌.ಎಂ. ಕುಮಾರ್‌ ತಿಳಿಸಿದರು. ಬಳಿಕ ಕರೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.