ಬಂಧನ ( ಸಾಂಕೇತಿಕ ಚಿತ್ರ)
ಬೆಂಗಳೂರು: ಪತ್ರಕರ್ತನ ಸೋಗಿನಲ್ಲಿ ಬೇಕರಿ ಮಾಲೀಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಯುಟ್ಯೂಬರ್‌ನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಶಫಿ ಬಂಧಿತ.
‘ಯುಟ್ಯೂಬರ್ ಆಗಿರುವ ಆರೋಪಿ, ನಗರದ ಹಲವು ಬೇಕರಿಗಳಿಗೆ ಹೋಗಿ ಸ್ವಚ್ಛತೆ ಇಲ್ಲ. ನಿರ್ವಹಣೆ ಸರಿ ಇಲ್ಲ ಎಂದು ಮಾಲೀಕರನ್ನು ಬೆದರಿಸುತ್ತಿದ್ದ. ಏಕಾಏಕಿ ಬೇಕರಿಗಳ ಒಳ ನುಗ್ಗಿ ವಿಡಿಯೊ ಚಿತ್ರೀಕರಿಸಿಕೊಂಡು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿ ಪರವಾನಗಿ ರದ್ದು ಮಾಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಇತ್ತೀಚೆಗೆ ಆರೋಪಿ ಹುಳಿಮಾವು ಬಳಿಯ ಅಕ್ಷಯನಗರದ ಬೇಕರಿಗಳ ಮಾಲೀಕರಿಗೆ ಬೆದರಿಕೆ ಹಾಕಿದ್ದ. ಯು–ಟ್ಯೂಬ್ ಚಾನಲ್‌ನ ಪತ್ರಕರ್ತ ಎಂದು ಹೇಳಿಕೊಂಡು ಬೇಕರಿ ಮಾಲೀಕರಿಂದ ಯುಪಿಎ ಮೂಲಕ ₹ 10 ಸಾವಿರ ಸುಲಿಗೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಇದೇ ರೀತಿ ಸುಮಾರು 50ಕ್ಕೂ ಹೆಚ್ಚು ಬೇಕರಿ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಆರೋಪಿಯಿಂದ ಮೊಬೈಲ್, ನಕಲಿ ಗುರುತಿನ ಚೀಟಿ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.