ADVERTISEMENT

ಬೆಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರ: ದೇಶದಲ್ಲೇ ಮೊದಲು

ಪ್ರಜಾವಾಣಿ ವಿಶೇಷ
Published 16 ಆಗಸ್ಟ್ 2023, 23:32 IST
Last Updated 16 ಆಗಸ್ಟ್ 2023, 23:32 IST
   

–ಆದಿತ್ಯ ಕೆ.ಎ.

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗಾಗಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತೆರೆದಿರುವ ವಿಶೇಷ ಬಾಲಮಂದಿರವು ಮಕ್ಕಳ ಪಾಲನೆ ಹಾಗೂ ರಕ್ಷಣೆಗೆ ಸಜ್ಜಾಗಿದೆ.

ಇಲ್ಲಿನ ಕಿದ್ವಾಯಿ ಆಸ್ಪತ್ರೆ ಬಳಿ ‘ಮಿಷನ್‌ ವಾತ್ಸಲ್ಯ’ ಯೋಜನೆ ಅಡಿ ಪ್ರತ್ಯೇಕ ಎರಡು ಬಾಲಮಂದಿರಗಳು ನಿರ್ಮಾಣವಾಗಿವೆ. ‌

ADVERTISEMENT

ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಮಾದರಿ ನಿಯಮದ ಅಡಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಬಾಲಮಂದಿರ ನಿರ್ಮಾಣಕ್ಕೆ ಅವಕಾಶವಿದೆ. ಅದರಂತೆ ರಾಜ್ಯದ 30 ಜಿಲ್ಲೆಗಳಲ್ಲಿ 30 ಬಾಲಕರ ಬಾಲಮಂದಿರ, 29 ಬಾಲಕಿಯರ ಬಾಲಮಂದಿರ, 1 ಶಿಶು ಮಂದಿರ, 1 ಅನುಪಾಲನಾ ಗೃಹ ಸೇರಿ ಒಟ್ಟು 61 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳ ಪಾಲನೆ, ಪೋಷಣೆಗೆ ಪ್ರತ್ಯೇಕ ಕೇಂದ್ರ ಇದುವರೆಗೂ ಇರಲಿಲ್ಲ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನದಲ್ಲಿ ಪ್ರಥಮ ಕೇಂದ್ರವು ಆರಂಭವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡೂವರೆ ವರ್ಷ ತಡ:

2020ರಲ್ಲಿ ನಡೆದಿದ್ದ ಕೇಂದ್ರದ ಯೋಜನಾ ಅನುಮೋದನೆ ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ರಾಜಧಾನಿಯಲ್ಲಿ ಎರಡು ಬಾಲಮಂದಿರ ಆರಂಭಿಸಲು ಅನುಮತಿ ಸಿಕ್ಕಿತ್ತು. ಕೇಂದ್ರವು ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಎರಡೂವರೆ ವರ್ಷ ತಡವಾಗಿ ಕೇಂದ್ರ ಆರಂಭವಾಗಿದೆ.

ತಲಾ 50 ಮಂದಿ ಸಾಮರ್ಥ್ಯ:

‘ಬಾಲಕ ಹಾಗೂ ಬಾಲಕಿಯರಿಗೆ ಎರಡು ಪ್ರತ್ಯೇಕ ಬಾಲಮಂದಿರ ನಿರ್ಮಿಸಲಾಗಿದೆ. ತಲಾ 50 ಮಂದಿ ಸಾಮರ್ಥ್ಯವಿದೆ. ಪರಿವೀಕ್ಷಣಾಧಿಕಾರಿ, ಗೃಹಪಾಲಕಿ, ರಕ್ಷಕರು, ಅಡುಗೆ ಸಹಾಯಕರು ಸೇರಿದಂತೆ ಎರಡೂ ಕೇಂದ್ರದಲ್ಲೂ ಒಟ್ಟು 16 ಹುದ್ದೆ ಸೃಷ್ಟಿಸಲಾಗಿದೆ. ಅವರು ಮಕ್ಕಳ ಪಾಲನೆ, ಶಿಕ್ಷಣಕ್ಕೆ ನೆರವಾಗಲಿದ್ದಾರೆ. ಈ ಹುದ್ದೆಗಳ ವೆಚ್ಚದ ಶೇಕಡ 60ರಷ್ಟು ಕೇಂದ್ರ ಸರ್ಕಾರ ಭರಿಸಿದರೆ, ಉಳಿದ ಹಣವನ್ನು ರಾಜ್ಯ ಸರ್ಕಾರ ನೀಡಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಬಾಲಮಂದಿರದಲ್ಲಿ ಮಕ್ಕಳಿಗೆ ಸಂಪೂರ್ಣ ಪುನರ್ವಸತಿ ಕಲ್ಪಿಸುತ್ತೇವೆ. ಕೆಲವರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಯಾರೂ ಮಕ್ಕಳನ್ನು ದಾಖಲಿಸಿಲ್ಲ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮತ್ತೆ ಸಮೀಕ್ಷೆ

‘ಪ್ರಾಥಮಿಕ ಸಮೀಕ್ಷೆಯಂತೆ ರಾಜ್ಯದಲ್ಲಿ 70 ಸಾವಿರ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಈ ಸಂಖ್ಯೆ ಮಕ್ಕಳನ್ನೂ ಒಳಗೊಂಡಿದೆ. ನಿಖರ ಮಾಹಿತಿ ತಿಳಿಯಲು ಮತ್ತೊಂದು ಸಮೀಕ್ಷೆ ನಡೆಸಲಾಗುತ್ತಿದೆ.
ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳು, ಸಾರ್ವಜನಿಕರಿಂದ ಶೋಷಣೆಗೆ ಒಳಗಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆಯೂ ಪ್ರಕರಣಗಳು ಬರುತ್ತಿವೆ. ಶೋಷಣೆ ತಪ್ಪಿಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.