ADVERTISEMENT

ಸರ್ಪದೋಷ ನಿವಾರಣೆ ನೆಪದಲ್ಲಿ ಲೈಂಗಿಕ ಕಿರುಕುಳ

ಜೋತಿಷಿ ತಂದೆ ಕೃತ್ಯಕ್ಕೆ ಕಾವಲುಗಾರನಾಗಿದ್ದ ಮಗನ ಬಂಧನ, ತಂದೆಗಾಗಿ ಪೊಲೀಸರಿಂದ ಶೋಧ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:51 IST
Last Updated 12 ಸೆಪ್ಟೆಂಬರ್ 2019, 19:51 IST
   

ಬೆಂಗಳೂರು: ಸರ್ಪದೋಷ ನಿವಾರಣೆ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದ್ದು, ಆ ಸಂಬಂಧ ಜೋತಿಷಿ ಮಣಿಕಂಠ ಆಚಾರ್ಯ (38) ಎಂಬಾತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಗಣೇಶ್ ಆಚಾರ್ಯ (65) ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

‘ಗಣೇಶ್ ಹಾಗೂ ಮಣಿಕಂಠ, ತಂದೆ– ಮಗ. ಹೊರಮಾವು ನಿವಾಸಿಗಳಾದ ಇಬ್ಬರೂ, ಜೋತಿಷಿಗಳು ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಅವರ ವಿರುದ್ಧ 32 ವರ್ಷದ ಮಹಿಳೆ ದೂರು ನೀಡಿದ್ದಾರೆ’ ಎಂದು ಬಾಣಸವಾಡಿ ಠಾಣೆ ಪೊಲೀಸರು ಹೇಳಿದರು.

ADVERTISEMENT

ಕುಕ್ಕೆಗೆ ಕರೆದೊಯ್ದು ಕೃತ್ಯ: ‘ದೂರುದಾರ ಮಹಿಳೆ, ಪತಿಯಿಂದ ದೂರವಾಗಿದ್ದಾರೆ. ಅವರಿಗೆ ಸರ್ಪದೋಷ ಇರುವುದಾಗಿ ಕೆಲವರು ಹೇಳಿದ್ದರು. ಅದರ ನಿವಾರಣೆಗೆ ಪೂಜೆ ಮಾಡಿಸಲು ಮುಂದಾಗಿದ್ದ ಮಹಿಳೆ, ಪರಿಚಯಸ್ಥರೊಬ್ಬರ ಮೂಲಕ ಗಣೇಶ್ ಹಾಗೂ ಮಣಿಕಂಠನನ್ನು ಸಂಪರ್ಕಿಸಿದ್ದರು. ಈ ಬಗ್ಗೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ನಿಮ್ಮದು ವೇಶ್ಯೆ ಜಾತಕ. ಎಷ್ಟು ಜನರನ್ನು ಮದುವೆಯಾದರೂ ನಿಲ್ಲುವುದಿಲ್ಲ’ ಎಂದು ಹೇಳಿದ್ದ ಆರೋಪಿಗಳು, ‘ದೋಷ ನಿವಾರಣೆಗೆ ‘ಮಾಂಗಲ್ಯ ಬಳ್ಳಿ’ ಪೂಜೆ ಮಾಡಬೇಕು. ಅದಕ್ಕೆ ₹ 40,000 ಖರ್ಚಾಗುತ್ತದೆ’ ಎಂದಿದ್ದರು. ಅದಕ್ಕೆ ಮಹಿಳೆ ಹಾಗೂ ಅವರ ತಂದೆ– ತಾಯಿ ಸಹ ಒಪ್ಪಿದ್ದರು.

‘ಮಹಿಳೆ ಹಾಗೂ ಅವರ ತಂದೆ– ತಾಯಿಯನ್ನು ಇದೇ 8ರಂದು ಕುಕ್ಕೆಗೆ ಕರೆದೊಯ್ದಿದ್ದ ಆರೋಪಿಗಳು, ಸುಬ್ರಹ್ಮಣ್ಯ ದೇವರ ಪೂಜೆ ಮಾಡಿದ್ದರು.

ಅದಾದ ನಂತರ ಆರೋಪಿ ಗಣೇಶ್, ಮಹಿಳೆಯನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದಿದ್ದ. ಮಗ ಮಣಿಕಂಠ ಕೊಠಡಿ ಹೊರಗೆ ಕಾವಲು ಕಾಯುತ್ತಿದ್ದ. ತಂದೆ–ತಾಯಿಯನ್ನೂ ಒಳಗೆ ಬಿಟ್ಟಿರಲಿಲ್ಲ.’

‘ಕೊಠಡಿಯಲ್ಲೇ ಮಹಿಳೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದ ಗಣೇಶ್, ‘ನಾನು ನಿನಗೆ 5 ಬಾರಿ ತಾಳಿ ಕಟ್ಟಿ, ನಿನ್ನೊಂದಿಗೆ 5 ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು.

ಆಗ ದೋಷ ನಿವಾರಣೆಯಾಗಲಿದೆ. ನನ್ನನ್ನು ದೇವರೆಂದು ತಿಳಿದು ಸೇವೆ ಮಾಡು’ ಎಂದಿದ್ದ. ಆತನ ವರ್ತನೆಯಿಂದ ಕೋಪಗೊಂಡ ಮಹಿಳೆ ಕೊಠಡಿಯಿಂದ ಹೊರಗೆ ಬಂದು, ತಂದೆ–ತಾಯಿಗೆ ವಿಷಯ ತಿಳಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.