ADVERTISEMENT

ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ ಸಡಗರ

ಕೋವಿಡ್ ಸಂಕಷ್ಟ ಪರಿಹರಿಸಲು ದೇವಿಗೆ ಪ್ರಾರ್ಥನೆ – ಸಹಸ್ರಾರು ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:37 IST
Last Updated 28 ಜನವರಿ 2021, 19:37 IST
ನಗರದಲ್ಲಿ ಬನಶಂಕರಿ ದೇವಿಯ ರಥೋತ್ಸವ ಗುರುವಾರ ಸಹಸ್ರಾರು ಭಕ್ತರು ಸಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಪ್ರಜಾವಾಣಿ ಚಿತ್ರ
ನಗರದಲ್ಲಿ ಬನಶಂಕರಿ ದೇವಿಯ ರಥೋತ್ಸವ ಗುರುವಾರ ಸಹಸ್ರಾರು ಭಕ್ತರು ಸಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್ ನಡುವೆಯೂ, ನಗರದ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಗುರುವಾರ 105ನೇ ಬ್ರಹ್ಮರಥೋತ್ಸವ ಸಡಗರದಿಂದ ನಡೆಯಿತು. ಪ್ರತಿ ಬಾರಿ ಹೊರಾಂಗಣದಲ್ಲಿ ನಡೆಯುತ್ತಿದ್ದ ರಥೋತ್ಸವ, ಈ ಬಾರಿ ದೇವಾಲಯದ ಆವರಣದಲ್ಲಿಯೇ ನೆರವೇರಿತು.

ದೇವಿ ಇದ್ದ ರಥಕ್ಕೆ ಬಾಳೆಹಣ್ಣು, ಧವನ, ಮರುಗ, ಪತ್ರೆಗಳನ್ನು ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು.

ಬೆಳಿಗ್ಗೆಯಿಂದಲೇ ಪೂಜೆ: ಅಮ್ಮನವರಿಗೆ ಗುರುವಾರ ಬೆಳಿಗ್ಗೆಯಿಂದಲೇ ನವಗ್ರಹಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗ ಹೋಮ, ರಥಬಲಿ ನಡೆಯಿತು. ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಹರಕೆ ಹೊತ್ತಿದ್ದ ಕೆಲವು ಭಕ್ತರು ನಿಂಬೆಹಣ್ಣಿನ ದೀಪ ಬೆಳಗುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.

ADVERTISEMENT

ದೇವಾಲಯದ ಉತ್ತರದ ಬಾಗಿಲಿನಿಂದ ಹೊರಟ ಅಮ್ಮನವರ ರಥೋತ್ಸವ ಮಧ್ಯಾಹ್ನ 12.45ರವರೆಗೆ ದೇವಾಲಯದ ಆವರಣದಲ್ಲೇ ಮುಂದುವರಿಯಿತು. ಈ ವೇಳೆ ವಾದ್ಯಗೋಷ್ಠಿ ಹಾಗೂ ಕಲಾ ಮೇಳಗಳೊಂದಿಗೆ ತೇರು ಸಾಗಿತು. ಸಾವಿರಾರು ಭಕ್ತರು ಜೈಕಾರ ಕೂಗಿದರು.

ಅನ್ನಸಂತರ್ಪಣೆ ಇರಲಿಲ್ಲ: ಕೋವಿಡ್ ಕಾರಣದಿಂದ ಈ ಬಾರಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿರಲಿಲ್ಲ. ರಥೋತ್ಸವದ ಕೆಲಸ, ಕಾರ್ಯಗಳಲ್ಲಿ ಭಾಗಿಯಾಗಿದ್ದ ಸಿಬ್ಬಂದಿ, ಕಾರ್ಯಕರ್ತರು ಮತ್ತು ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರಿಗೆ ಮಾತ್ರ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 5ರ ಹೊತ್ತಿಗೆ ದೇವಳದಲ್ಲಿನ ಶ್ರೀ ಶಾಕಾಂಬರಿ ದೇವಿಗೆ ಧೂಳೋತ್ಸವ ನಡೆಯಿತು. ನಂತರ ಬನಶಂಕರಿ ಅಮ್ಮ, ಚೌಡೇಶ್ವರಿ ದೇವಿ, ದುರ್ಗಾದೇವಿ, ಪುಟ್ಟೇನಹಳ್ಳಿ ಆಂಜನೇಯ ಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯೇಶ್ವರ ಸ್ವಾಮಿ, ರಾಜರಾಜೇಶ್ವರಿ ಹಾಗೂ ಪಾರ್ವತಿ ಪರಮೇಶ್ವರರ ಮುತ್ತಿನ ಪಲ್ಲಕ್ಕಿ ಉತ್ಸವ ಸರಳವಾಗಿ ಜರುಗಿತು. ಈ ಕಾರ್ಯಕ್ರಮದಲ್ಲೂ ಭಕ್ತರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಮಳಿಗೆಗಳ ಆಕರ್ಷಣೆ ಇರಲಿಲ್ಲ

ಕಡಲೆಪುರಿ, ಬೆಂಡು, ಬತ್ತಾಸು, ಕಲ್ಯಾಣ ಸೇವೆ, ಪೂಜಾ ಸಾಮಗ್ರಿಗಳು, ಹೂವು, ಹಣ್ಣು ಇತ್ಯಾದಿಗಳ ಮಾರಾಟ ಜೋರಾಗಿರುತ್ತಿತ್ತು. ಹಳ್ಳಿ ಸೊಗಡಿನಂತೆ ಇತರೆ ಸಾಮಗ್ರಿಗಳೂ ಜಾತ್ರೆಯಲ್ಲಿ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಮಳಿಗೆಗಳನ್ನು ತೆರೆಯಲು ಅವಕಾಶವಿರಲಿಲ್ಲ. ದೇವಸ್ಥಾನದ ಅಕ್ಕಪಕ್ಕದಲ್ಲಿ ಕೆಲವು ಮಳಿಗೆಗಳನ್ನು ಮಾತ್ರ ತೆರೆಯಲಾಗಿತ್ತು.

ರಥೋತ್ಸವದ ವೇಳೆ ಅಂತರ ನಿಯಮ ಪಾಲನೆ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.