ADVERTISEMENT

ಬನಶಂಕರಿ ಉದ್ಯಾನದ ಸ್ಥಿತಿ ಶೋಚನೀಯ: ಬಿಕೆಸಿ ಆರೋಪ

ಹಸಿರು ತಾಣದಲ್ಲಿ ಶೆಡ್‌ಗಳು, ಮನರಂಜನೆ ತಾಣ:

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 0:25 IST
Last Updated 4 ಅಕ್ಟೋಬರ್ 2025, 0:25 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ಬೆಂಗಳೂರು: ‘ಬನಶಂಕರಿ 2ನೇ ಹಂತದಲ್ಲಿನ ಉದ್ಯಾನದ ಸ್ಥಿತಿ ಶೋಚನೀಯವಾಗಿದ್ದು, ಉದ್ಯಾನದಲ್ಲಿ ಕಾವಲುಗಾರನ ಒಂದು ಶೆಡ್‌ ಜೊತೆಗೆ ಇನ್ನೆರಡು ಶೆಡ್‌ಗಳು ಇತ್ತೀಚೆಗೆ ತಲೆ ಎತ್ತಿವೆ’ ಎಂದು ಕಾಂಗ್ರೆಸ್‌ ನಾಯಕ ಬಿ.ಕೆ. ಚಂದ್ರಶೇಖರ್‌ ಆರೋಪಿಸಿದ್ದಾರೆ.

‘ಸರಿ ಸುಮಾರು 25 ವರ್ಷಗಳ ಹಿಂದೆ ಬನಶಂಕರಿ 2ನೇ ಹಂತದ ಮಧ್ಯಭಾಗದಲ್ಲಿ ನಿರ್ಮಿಸಿದ್ದ ಉದ್ಯಾನ ಹಸಿರಿನಿಂದ ಕಂಗೊಳಿಸುತ್ತಿತ್ತು. ಇದೀಗ, ಉದ್ಯಾನದ ಒಳಭಾಗದಲ್ಲಿ ಮನರಂಜನೆಗಾಗಿ ಕಾರಂಜಿಗಳನ್ನೂ ನಿರ್ಮಿಸಲಾಗಿದೆ. ಉದ್ಯಾನಗಳು ಮನರಂಜನಾ ತಾಣಗಳಲ್ಲ. ಹೀಗೆ ವಿರೂಪಗೊಳಿಸಿರುವುದರಲ್ಲಿ ಸ್ಥಳೀಯ ಶಾಸಕ ಆರ್. ಅಶೋಕ ಅವರ ಪಾತ್ರ ಇರಲು ಸಾಧ್ಯವಿಲ್ಲ’ ಎಂದಿದ್ದಾರೆ.

ADVERTISEMENT

‘ಕರ್ನಾಟಕ ಉದ್ಯಾನಗಳ ಕಾಯ್ದೆ–1985ರ’ ಪ್ರಕಾರ ಉದ್ಯಾನದ ಒಟ್ಟು ವಿಸ್ತೀರ್ಣ ಎರಡು ಹೆಕ್ಟೇರ್‌ಗಿಂತ ಕಡಿಮೆಯಿದ್ದರೆ ಕಾವಲುಗಾರರಿಗೂ ವಸತಿ ಗೃಹಗಳನ್ನು ನಿರ್ಮಿಸುವಂತಿಲ್ಲ. ಉದ್ಯಾನ ಎಂದರೆ ಯಾವುದೇ ಕಟ್ಟಡಗಳಿಲ್ಲದ ಭೂಮಿಯ ತುಂಡು. ಮರಗಳು, ಸಸ್ಯಗಳು, ಹುಲ್ಲುಗಾವಲು ಅಥವಾ ಹೂವಿನ ಹಾಸಿಗೆಗಳನ್ನು ಹೊಂದಿರುವ ಸ್ಥಳವನ್ನಾಗಿರಿಸಿ ಸಾರ್ವಜನಿಕರಿಗೆ ಗಾಳಿ ಅಥವಾ ಬೆಳಕಿಗಾಗಿ ನಿರ್ವಹಿಸಬೇಕು. ಈ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ’ ಎಂದು ದೂರಿದ್ದಾರೆ.

‘ಉದ್ಯಾನದ ಜಾಗವನ್ನು ಟಿಲಿಫೋನ್ ಕೇಬಲ್‌ ಉಗ್ರಾಣಕ್ಕಾಗಿ ಬಿಡಿಎ ಹಂಚಿಕೆ ಮಾಡಿದ್ದ ಜಾಗವನ್ನು ಅಂದಿನ ಕೇಂದ್ರದ ದೂರಸಂಪರ್ಕ ಸಚಿವರಾಗಿದ್ದ ಎಚ್.ಎನ್‌. ಬಹುಗುಣ ಅವರ ನೆರವಿನೊಂದಿಗೆ ವಾಪಸ್‌ ಪಡೆಯಲಾಯಿತು. ಬಿಡಿಎ ಮತ್ತು ನಗರ ಪಾಲಿಕೆಯ ಅಧಿಕಾರಿಗಳಾಗಿದ್ದ ಎ. ರವೀಂದ್ರ, ಜೆ. ಅಲೆಕ್ಸಾಂಡರ್, ಎಂ.ಆರ್. ಶ್ರೀನಿವಾಸ ಮೂರ್ತಿ ಅವರ ಸಹಕಾರದೊಂದಿಗೆ ಒಂದು ವರ್ಷದಲ್ಲಿ ಪಾರ್ಕ್ ನಿರ್ಮಾಣ ಮಾಡಿದೆವು’ ಎಂದು ತಿಳಿಸಿದ್ದಾರೆ.

ಹೆಸರಿಡಲು ಪ್ರಸ್ತಾಪ: ‘ಅಭಿವೃದ್ಧಿಯಾದ ಉದ್ಯಾನಕ್ಕೆ ನನ್ನ ಹೆಸರಿಡಲು ಸ್ಥಳೀಯ ಮುಖಂಡರು ಪ್ರಸ್ತಾಪಿಸಿದ್ದರು. ನಾನು ತಿರಸ್ಕರಿಸಿದ್ದೆ.  ಅಂದಿನ ಬಿಬಿಎಂಪಿ ಸದಸ್ಯ ಬಸವರಾಜು ಅವರು ‘ಬನಶಂಕರಿ ಬೃಂದಾವನ’ ಎಂದು ಹೆಸರಿಡುವ ಸಲಹೆಗೆ ತಕ್ಷಣ ಒಪ್ಪಿದ್ದೆ. ಆದರೆ, ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಆರ್. ಆಶೋಕ ಅವರ ಹೆಸರಿರುವ ಕಲ್ಲನ್ನು ಸಂಕೋಚವೇ ಇಲ್ಲದೆ ನೆಟ್ಟಿದ್ದಾರೆ. ಒಂದು ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಈ  ಸಣ್ಣತನ ಯಾಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.