ADVERTISEMENT

ಮಹಿಳೆ ಕೈ–ಕಾಲು ಕಟ್ಟಿ ದರೋಡೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:42 IST
Last Updated 28 ಜೂನ್ 2021, 21:42 IST

ಬೆಂಗಳೂರು: ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು, ಒಂಟಿಯಾಗಿದ್ದ ಮಹಿಳೆಯ ಕೈ–ಕಾಲು ಕಟ್ಟಿ ಹಾಕಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

‘ತಿಂಡ್ಲು ಮುಖ್ಯರಸ್ತೆಯ ಬಸವ ಸಮಿತಿ ಲೇಔಟ್‌ ನಿವಾಸಿ ಸುಭಾಷ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ದ 170 ಗ್ರಾಂ ಚಿನ್ನಾಭರಣ ಹಾಗೂ ₹ 2 ಲಕ್ಷ ನಗದು ದೋಚಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸುಭಾಷ್ ಅವರು ಪೀಣ್ಯ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಜಯಶ್ರೀ ಜೊತೆ ವಾಸವಿದ್ದಾರೆ. ಪತಿ ಕೆಲಸಕ್ಕೆ ಹೋದಾಗ ಪತ್ನಿ ಮಾತ್ರ ಮನೆಯಲ್ಲಿರುತ್ತಿದ್ದರು. ಇದನ್ನು ತಿಳಿದುಕೊಂಡೇ ಆರೋಪಿಗಳು ಕೃತ್ಯಎಸಗಿದ್ದಾರೆ.’

ADVERTISEMENT

‘ಶನಿವಾರ (ಜೂನ್ 26) ಬೆಳಿಗ್ಗೆ ಎಂದಿನಂತೆ ಸುಭಾಷ್ ಕೆಲಸಕ್ಕೆ ಹೋಗಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ್ದ ದುಷ್ಕ್ರಮಿಗಳು, ಜಯಶ್ರೀ ಅವರ ಕೈ–ಕಾಲು ಹಗ್ಗದಿಂದ ಕಟ್ಟಿ ಹಾಕಿದ್ದರು. ನಂತರ, ಮನೆಯಲ್ಲೆಲ್ಲ ಹುಡುಕಾಡಿ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ಧಾರೆ. ಕೆಲ ನಿಮಿಷ ಬಿಟ್ಟು ಹಗ್ಗ ಬಿಚ್ಚಿಕೊಂಡಿದ್ದ ಜಯಶ್ರೀ, ಮನೆಯಿಂದ ಹೊರಗೆ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳುತಿಳಿಸಿವೆ.

ಕಿಟಕಿಯಲ್ಲಿಟ್ಟಿದ್ದ ಆಭರಣ ಕಳವು; ಇಬ್ಬರ ಬಂಧನ
ಬ್ಯಾಡರಹಳ್ಳಿ ಕಬ್ಬಾಳಮ್ಮ ದೇವಸ್ಥಾನ ಬಳಿಯ ಮನೆಯೊಂದರ ಕಿಟಕಿಯಲ್ಲಿಟ್ಟಿದ್ದ ಚಿನ್ನಾಭರಣ ಕದ್ದಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಅಂದ್ರಹಳ್ಳಿಯ ಭರತ್ (28) ಹಾಗೂ ಅರ್ಜುನ್ (29) ಬಂಧಿತರು. ಅವರಿಂದ ₹ 7.26 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ, ಮನೆಯ ಕಿಟಕಿ ಬಳಿ ಆಭರಣವಿಟ್ಟಿದ್ದರು. ಅದನ್ನು ನೋಡಿದ್ದ ಆರೋಪಿಗಳು, ಕಿಟಕಿ ಮೂಲಕ ಆಭರಣ ಕದ್ದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದೂ ತಿಳಿಸಿದರು.

‘ಬಂಧಿತ ಆರೋಪಿಗಳು, ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಯಾರೂ ಇಲ್ಲದ ಮನೆಗಳನ್ನು ಹಾಗೂ ಕಿಟಕಿ ಬಳಿ ಆಭರಣ ಇರಿಸುತ್ತಿದ್ದವರನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು. ಈ ಆರೋಪಿಗಳು, ಎರಡು ಕಡೆ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.

ರೈಸ್ ಪುಲ್ಲಿಂಗ್ ಹೆಸರಿನಲ್ಲಿ₹ 25 ಲಕ್ಷ ವಂಚನೆ
ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ₹ 25 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ವಂಚನೆಗೀಡಾಗಿರುವ ಧಾರವಾಡದ ರಾಜಾರಾಮ್ ಬೆಟಸೂರು (64) ಎಂಬುವವರು ದೂರು ನೀಡಿದ್ದಾರೆ. ಅದರನ್ವಯ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಂಗಳೂರಿಗೆ ಕೆಲ ತಿಂಗಳ ಹಿಂದೆ ಬಂದಿದ್ದ ರಾಜಾರಾಮ್, ಆರೋಪಿ ಮಧುಸೂದನ್ ಎಂಬಾತನನ್ನು ಭೇಟಿಯಾಗಿದ್ದರು. ಆತನೇ ರೈಸ್ ಫುಲ್ಲಿಂಗ್ ಚೆಂಬು ಇರುವುದಾಗಿ ಹೇಳಿದ್ದ. ಕೆಲ ದಿನಗಳ ಹಿಂದಷ್ಟೇ ರಾಜಾರಾಮ್‌ಗೆ ಕೆಲ ದಾಖಲೆ ಕಳುಹಿಸಿದ್ದ ಆರೋಪಿ, ರೈಸ್ ಪುಲ್ಲಿಂಗ್ ಹಣ ಗಳಿಕೆ ಬಗ್ಗೆ ವಿವರಿಸಿದ್ದ. ಚೆಂಬು ಖರೀದಿಸಲು ನೆರವಾದರೆ ಪಾಲು ನೀಡುವುದಾಗಿ ತಿಳಿಸಿದ್ದ.’

‘ಆರೋಪಿ ಮಾತು ನಂಬಿದ್ದ ರಾಜಾರಾಮ್, ತಮ್ಮೂರಿನಲ್ಲಿದ್ದ ಜಮೀನು ಮಾರಿ ಹಾಗೂ ಸ್ನೇಹಿತರ ಬಳಿ ಹಣ ಸಾಲ ಪಡೆದು ಆರೋಪಿಗಳಿಗೆ ನೀಡಿದ್ದರು. ಇದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.