ADVERTISEMENT

ಸೂಟ್‌ಕೇಸ್ ಆತಂಕ; ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:43 IST
Last Updated 28 ಜೂನ್ 2021, 21:43 IST
ಮಲ್ಲೇಶ್ವರ ಪಾದಚಾರಿ ಮಾರ್ಗದಲ್ಲಿದ್ದ ಸೂಟ್‌ಕೇಸ್
ಮಲ್ಲೇಶ್ವರ ಪಾದಚಾರಿ ಮಾರ್ಗದಲ್ಲಿದ್ದ ಸೂಟ್‌ಕೇಸ್   

ಬೆಂಗಳೂರು: ಮಲ್ಲೇಶ್ವರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಸೂಟ್‌ಕೇಸ್ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿ, ಅದರಲ್ಲಿ ಬಟ್ಟೆ ಇರುವುದಾಗಿ ತಿಳಿಸಿದ ನಂತರವೇ ಸ್ಥಳೀಯರು ನಿಟ್ಟುಸಿರು ಬಿಟ್ಟರು.

ಅಪರಿಚಿತರು ಪಾದಚಾರಿ ಮಾರ್ಗದಲ್ಲಿ ಕಪ್ಪು ಬಣ್ಣದ ಸೂಟ್‌ಕೇಸ್‌ ಇರಿಸಿ ಹೋಗಿದ್ದರು. ಗಂಟೆಯವರೆಗೂ ಸೂಟ್‌ಕೇಸ್ ಸ್ಥಳದಲ್ಲೇ ಇತ್ತು. ಯಾರೂ ವಾಪಸು ತೆಗೆದುಕೊಂಡು ಹೋಗಿರಲಿಲ್ಲ. ಅದನ್ನು ನೋಡಿದ್ದ ಸ್ಥಳೀಯರು, ‘ಸೂಟ್‌ಕೇಸ್‌ನಲ್ಲಿ ಬಾಂಬ್ ಇರಬಹುದು’ ಎಂದು ಅನುಮಾನಪಟ್ಟು ಠಾಣೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು, ಸೂಟ್‌ಕೇಸ್ ಇದ್ದ ಜಾಗದಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಿದರು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೂಟ್‌ಕೇಸ್ ತೆರೆದರು.

ADVERTISEMENT

‘ಸೂಟ್‌ಕೇಸ್‌ನಲ್ಲಿ ಸ್ಫೋಟಕ ವಸ್ತು ಇರುವ ಆತಂಕ ಸ್ಥಳೀಯರಲ್ಲಿತ್ತು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಸೂಟ್‌ಕೇಸ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಇರಲಿಲ್ಲ. ಬಟ್ಟೆಗಳು ಮಾತ್ರ ಇದ್ದವು’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.