ಬೆಂಗಳೂರು: ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ಜೂನ್ 11ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವ ಆಯೋಜಿಸಲಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಂಡ ನಂತರ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಮೊದಲ ತಂಡವಾಗಿದ್ದು, 7,285 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 39,789 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. ಇದರಲ್ಲಿ ಶೇ 58.84ರಷ್ಟು ವಿದ್ಯಾರ್ಥಿನಿಯರು ಮತ್ತು ಶೇ 41.15ರಷ್ಟು ವಿದ್ಯಾರ್ಥಿಗಳಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕೆ.ಆರ್. ಜಲಜಾ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು. ಬಿಹಾರ ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಒಂಬತ್ತು ಮಂದಿ ಪಿಎಚ್.ಡಿ. ಪದವಿಗೆ ಅರ್ಹರಾಗಿದ್ದಾರೆ. ಇದರಲ್ಲಿ ಗಣಿತದಲ್ಲಿ ಆರು, ರಸಾಯನ ವಿಜ್ಞಾನದಲ್ಲಿ ಒಬ್ಬರು ಮತ್ತು ಶಿಕ್ಷಣ ವಿಷಯದಲ್ಲಿ ಇಬ್ಬರು ಪಿಎಚ್.ಡಿ ಪದವಿ ಸ್ವೀಕರಿಸಲಿದ್ದಾರೆ.
ಘಟಿಕೋತ್ಸವದಲ್ಲಿ 64 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಗುತ್ತದೆ. ಇದರಲ್ಲಿ ಸ್ನಾತಕೋತ್ತರ ಪದವಿಯ 48 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 39 ವಿದ್ಯಾರ್ಥಿನಿಯರು, 9 ಮಂದಿ ವಿದ್ಯಾರ್ಥಿಗಳು. ಸ್ನಾತಕ ಪದವಿಯಲ್ಲಿ 9 ಮಂದಿ ಚಿನ್ನದ ಪದಕ ಪಡೆದ್ದು, ಇದರಲ್ಲಿ 6 ಮಂದಿ ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು ಎಂದು ಅವರು ವಿವರಿಸಿದರು.
ರ‍್ಯಾಂಕ್ ವಿಜೇತರಲ್ಲಿ 57 ವಿದ್ಯಾರ್ಥಿಗಳು ಬೆಂಗಳೂರು ನಗರ ವಿಶ್ವವಿದ್ಯಾಲಯ ಸ್ಥಾಪಿಸಿರುವ 41 ಚಿನ್ನದ ಪದಕಗಳು ಮತ್ತು ನಗದು ಬಹುಮಾನ ಹಾಗೂ ವಿವಿಧ ದಾನಿಗಳು ಸ್ಥಾಪಿಸಿರುವ ಒಟ್ಟು 16 ಚಿನ್ನದ ಪದಕಗಳನ್ನು ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಟಿ.ಜವರೇಗೌಡ, ಸಿಂಡಿಕೆಟ್ ಸದಸ್ಯರು ಹಾಜರಿದ್ದರು.
- ಪದಕ ಪಡೆದವರ ಪ್ರತಿಕ್ರಿಯೆ
ಚಿನ್ನದ ಪದಕ ವಿಜೇತರಲ್ಲಿ ಅನೇಕರಿಗೆ ಇದು ಸುಲಭದ 'ಸಾಧನೆ’ ಆಗಿರಲಿಲ್ಲ. ಶೈಕ್ಷಣಿಕ ನಿರ್ವಹಣೆ ಮತ್ತು ಮನೆಯಲ್ಲಿ ಜವಾಬ್ದಾರಿಗಳ ನಡುವೆ ಪರಿಶ್ರಮದೊಂದಿಗೆ ಈ ಗುರಿ ತಲುಪಿದ್ದಾರೆ. ಎಂ.ಎಸ್ಸಿ ರಸಾಯನ ವಿಜ್ಞಾನದಲ್ಲಿ ಐದು ಚಿನ್ನದ ಪದಕ ಪಡೆದಿರುವ ಅನುಷಾ ಅವರ ತಂದೆ ಕೃಷಿಕರು. ತಾಯಿ ಗಾರ್ಮೆಂಟ್ ಉದ್ಯೋಗಿ. ಚಿನ್ನದ ಪದಕ ಪಡೆಯುವುದು ಸುಲಭವಾಗಿರಲಿಲ್ಲ. ‘ಪದವಿಯಲ್ಲಿ ಭೌತವಿಜ್ಞಾನ ರಸಾಯನ ವಿಜ್ಞಾನ ಮತ್ತು ಗಣಿತ ಸಂಯೋಜನೆಯ ತೆಗೆದುಕೊಂಡೆ. ರಸಾಯನ ವಿಜ್ಞಾನ ನನ್ನನ್ನು ಆಕರ್ಷಿಸಿತು. ಮುಂದೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಗಳನ್ನು ಬರೆಯುವ ಯೋಚನೆ ಇದೆ’ ಎಂದು ಅನುಷಾ ಪ್ರತಿಕ್ರಿಯಿಸಿದರು.
ವಿ.ವಿ ಪುರಂ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಆರ್.ಎಸ್. ಬಿ.ಕಾಂನಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ತಂದೆ ಬ್ಯಾಂಕ್‌ವೊಂದರಲ್ಲಿ ವಾಚ್‌ಮೆನ್ ಆಗಿದ್ದಾರೆ. ಮನೆ ನಿರ್ವಹಣೆಗಾಗಿ ಸಹೋದರ 10ನೇ ತರಗತಿಗೆ ಓದು ನಿಲ್ಲಿಸಿ ಉದ್ಯೋಗಕ್ಕೆ ಸೇರಿದ್ದಾರೆ. ‘ನನ್ನ ಅಣ್ಣನೇ ನನ್ನನ್ನು ಓದಿಸಿದ್ದು. ನನಗೆ ಚಾರ್ಟಡ್ ಅಕೌಂಟೆಂಟ್ ಆಗಬೇಕೆಂಬ ಕನಸಿದೆ. ಸದ್ಯ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಅಕೌಂಟಿಂಗ್ ನನ್ನ ನೆಚ್ಚಿನ ವಿಷಯ’ ಎಂದು ಅವರು ಹೇಳಿದರು.
ಚಿನ್ನದ ಪದಕ ವಿಜೇತರಲ್ಲಿ ಪ್ರಿಯಾ ಬಾಲಚಂದ್ರ ತುಸು ವಿಭಿನ್ನ. ಇವರು 56ನೇ ವಯಸ್ಸಿನಲ್ಲಿ ಸೆಂಟ್ರಲ್ ಕಾಲೇಜಿನ ವಿದೇಶಿ ಭಾಷಾ ವಿಭಾಗದಿಂದ ಫ್ರೆಂಚ್‌ನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಫ್ರೆಂಚ್‌ನಲ್ಲಿ ಡಿಪ್ಲೊಮಾ ಪಡೆದು 22 ವರ್ಷಗಳ ನಂತರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ನಾನು ಅಲೈಯನ್ಸ್ ಫ್ರಾಂಚೈಸ್‌ನಲ್ಲಿ ಉದ್ಯೋಗ ಮಾಡಿದ್ದೇನೆ. ಕೆಲವು ಶಾಲೆಗಳಲ್ಲಿ ಫ್ರೆಂಚ್ ಕಲಿಸಿದ್ದೇನೆ. ಎರಡು ವರ್ಷದ ವಿರಾಮ ತೆಗೆದುಕೊಂಡು ಈಗ ಫ್ರೆಂಚ್‌ನಲ್ಲಿ ಎಂಎ ಪೂರೈಸಿದ್ದೇನೆ. ಪಿಎಚ್.ಡಿ ಮಾಡುವ ಕನಸಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.