ADVERTISEMENT

ಬೆಂಗಳೂರಿನಲ್ಲಿ ಇಬ್ಬರು ಕುಖ್ಯಾತ ರೌಡಿಗಳಿಗೆ ಗುಂಡೇಟು: ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 2:46 IST
Last Updated 13 ಜನವರಿ 2020, 2:46 IST
   

ಬೆಂಗಳೂರು:ಇಬ್ಬರು ಕುಖ್ಯಾತ ರೌಡಿಗಳಿಗೆ ಭಾನುವಾರ ರಾತ್ರಿ ಬಿಟಿಎಂ ಕೆರೆಯ ಬಳಿ ರಂಕಾ ಕಾಲೊನಿ ರಸ್ತೆಯಲ್ಲಿ ಕಾಲಿಗೆ ಗುಂಡು ಹೊಡೆದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸತೀಶ ಅಲಿಯಾಸ್ ಶೆಡ್ಕ (29) ಮತ್ತು ಹಂದಿ ಮಹೇಶ (32) ಗುಂಡೇಟು ತಿಂದ ರೌಡಿಗಳು.

ಕೋರಮಂಗಲ ಮತ್ತು ಶಿಡ್ಲಘಟ್ಟ ಪೊಲೀಸ್ ಠಾಣೆಗಳ ರೌಡಿಶೀಟರ್ ಪಟ್ಟಿಯಲ್ಲಿ ಸತೀಶನ ಹೆಸರಿದೆ. ಈತನ ವಿರುದ್ಧ ಕೊಲೆ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ADVERTISEMENT

ಶಿಡ್ಲಘಟ್ಟ ಠಾಣೆಯ ರೌಡಿಶೀಟರ್ ಆಗಿರುವ ಹಂದಿ ಮಹೇಶ ಮೇಲೆಯೂ ಕೂಡಾ ಹಲವು ಪ್ರಕರಣಗಳಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಶಿಡ್ಲಘಟ್ಟ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ನಗರಸಭೆ ಸದಸ್ಯ ವೆಂಕಟರಮಣ ಅವರ ಕೊಲೆ, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತರಕಾರಿ ಮಹೇಶ್ ಕೊಲೆ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದಾರೆ. ಅಲ್ಲದೆ, ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ 2011ರಲ್ಲಿ ಮಿಲ್ ಮಂಜನ ಮೇಲೆ ಹಲ್ಲೆ,ಹೊಸೂರು ಠಾಣಾ ವ್ಯಾಪ್ತಿಯಲ್ಲಿ 2014ರಲ್ಲಿ ಕಾವಲ್ ವಿಜಿ ಕೊಲೆ ಪ್ರಕರಣದಲ್ಲೂ ಸತೀಶ ಆರೋಪಿ ಎಂದು ಪೊಲೀಸರು ತಿಳಿಸಿದರು.

ಇಬ್ಬರೂ ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿತ್ತು. ಇಬ್ಬರೂ ತಮಿಳುನಾಡಿನ ಬಾಗಲೂರಿನಲ್ಲಿ ಅಡಗಿಕೊಂಡಿದ್ದರು. ಭಾನುವಾರ ರಾತ್ರಿ ಬಿಟಿಎಂ ಕೆರೆಯ ಬಳಿ ಜೊತೆಯಲ್ಲಿರುವ ಮಾಹಿತಿ ಸಿಕ್ಕಿದ ತಕ್ಷಣ ಅಲ್ಲಿಗೆ ತೆರಳಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ಮತ್ತು ಕೇಶವಮೂರ್ತಿ ನೇತೃತ್ವದ ಪೊಲೀಸರ ತಂಡ ಇಬ್ಬರನ್ನೂ ಬಂಧಿಸಲು ಕಾರ್ಯಾಚರಣೆಗಿಳಿದಿತ್ತು.

ಈ ವೇಳೆ ಆರೋಪಿಗಳು ಕಾನ್‌ಸ್ಟೆಬಲ್ ಹನುಮೇಶ ಮೇಲೆ ಚೂರಿಯಿಂದ ಇರಿದು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆತ್ಮರಕ್ಷಣೆಗಾಗಿ ರೌಡಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಗಾಯಗೊಂಡ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಕಾರು ವಶಪಡಿಸಿಕೊಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.