ADVERTISEMENT

ಜಿಬಿಎ ವ್ಯಾಪ್ತಿ: 35 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ?

1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯ

ಎ.ಎಂ.ಸುರೇಶ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ 50 ಸಾವಿರ ಅರ್ಜಿಗಳು ಬಂದಿದ್ದು, ನಗರಾಭಿವೃದ್ಧಿ ಇಲಾಖೆ ಈಚೆಗೆ ಹೊರಡಿಸಿರುವ ಆದೇಶದ ಪ್ರಕಾರ ಸುಮಾರು 35 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಿಗಲಿದೆ ಎಂದು ಅಂದಾಜಿಸಲಾಗಿದೆ. 

ಜಿಬಿಎ ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಇದೇ 13ರಂದು ಆದೇಶ ಹೊರಡಿಸಿದೆ.

ಅದರ ಪ್ರಕಾರ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1,200 ಚದರಡಿ ನಿವೇಶನದಲ್ಲಿ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್‌ +3 ಅಂತಸ್ತುವರೆಗಿನ ವಸತಿ ಕಟ್ಟಡಗಳಿಗೆ ಸಿಸಿ, ಒಸಿ ಅಗತ್ಯವಿಲ್ಲ. ಇದನ್ನು ಆಧರಿಸಿ ಅರ್ಜಿ ಸಲ್ಲಿಸಿರುವ ಗ್ರಾಹಕರಿಗೆ ವಿದ್ಯುತ್‌ ಸಂಪರ್ಕ ನೀಡುವ ಪ್ರಕ್ರಿಯೆಯನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಆರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸೆಪ್ಟೆಂಬರ್‌ನಲ್ಲಿ ಹೊರಡಿಸಿದ್ದ ಆದೇಶದಲ್ಲಿ ನಕ್ಷೆ ಅನುಮೋದನೆ ಪಡೆದು 1,200 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ, ಬಹುತೇಕ ವಸತಿ ಕಟ್ಟಡಗಳನ್ನು ಬಿ ಖಾತಾ ನಿವೇಶನಗಳಲ್ಲಿ ನಿರ್ಮಿಸಿದ್ದು, ನಕ್ಷೆ ಅನುಮೋದನೆ ಪಡೆದಿರಲಿಲ್ಲ. ಇದರಿಂದಾಗಿ ಹೆಚ್ಚಿನ ಜನರಿಗೆ ಈ ಆದೇಶದಿಂದ ಉಪಯೋಗ ಆಗುತ್ತಿರಲಿಲ್ಲ. ಇಂಧನ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದರು.

ಈ ತಿಂಗಳ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿ, ನಕ್ಷೆ ಅನುಮೋದನೆ ಪಡೆದು ನಿರ್ಮಿಸಿರುವ ಎಂಬ ಷರತ್ತನ್ನು ಕೈಬಿಡಲಾಗಿದೆ. ಪರಿಷ್ಕೃತ ಆದೇಶದಲ್ಲಿ ಜಿಬಿಎ ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಒಸಿ ಇಲ್ಲದಿದ್ದರೆ ನೀರು ಮತ್ತು ವಿದ್ಯುತ್‌ ಸಂಪರ್ಕ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪಾಲನೆ ಮಾಡುವ ದೃಷ್ಟಿಯಿಂದ ಸಿಸಿ, ಒಸಿ ಇಲ್ಲದ ಕಟ್ಟಡಗಳಿಗೆ ಈ ವರ್ಷದ ಏಪ್ರಿಲ್‌ನಿಂದ ವಿದ್ಯುತ್‌, ನೀರಿನ ಸಂಪರ್ಕ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಸ್ಕಾಂ ಸೇರಿದಂತೆ ರಾಜ್ಯದ ಐದು ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ ಕೋರಿ ಸಲ್ಲಿಸಿರುವ ಸುಮಾರು ಒಂದು ಲಕ್ಷ ಅರ್ಜಿಗಳು ಇತ್ಯರ್ಥವಾಗದೆ ಉಳಿದಿದ್ದವು.

ಈಗ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸಿಸಿ, ಒಸಿಯಿಂದ ವಿನಾಯಿತಿ ನೀಡಿದ್ದು, ವಿದ್ಯುತ್‌ ಸಂಪರ್ಕ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಸಂಬಂಧಪಟ್ಟ ಉಪ ವಿಭಾಗಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿ ತಿಳಿಸಿದರು.

ಇನ್ನಷ್ಟು ದಿನ ಕಾಯುವುದು ಅನಿವಾರ್ಯ
1,200 ಚದರಡಿ ವಿಸ್ತೀರ್ಣಕ್ಕಿಂತ ದೊಡ್ಡ ನಿವೇಶಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಹಾಗೂ ವಾಣಿಜ್ಯ ಬಳಕೆಯ ಕಟ್ಟಡಗಳಿಗೆ ಸದ್ಯಕ್ಕೆ ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ. 1,200 ಚದರಡಿ ವಿಸ್ತೀರ್ಣದವರೆಗಿನ ವಸತಿ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಪ್ರಕ್ರಿಯೆ ಮುಗಿದ ಬಳಿಕ, ದೊಡ್ಡ ಕಟ್ಟಡಗಳಿಗೆ ಸಂಪರ್ಕ ನೀಡಲು ಪ್ರತ್ಯೇಕ ಕಾಯ್ದೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಈ ವರ್ಷದ ಏಪ್ರಿಲ್‌ವರೆಗೆ ನಿರ್ಮಿಸಿರುವ ಎಲ್ಲ ರೀತಿಯ ಕಟ್ಟಡಗಳಿಗೆ ಸಿಸಿ, ಒಸಿಯಿಂದ ಒಮ್ಮೆಗೆ ಮಾತ್ರ ವಿನಾಯಿತಿ ನೀಡಿ, ದಂಡ ಕಟ್ಟಿಸಿಕೊಂಡು ವಿದ್ಯುತ್‌ ಸಂಪರ್ಕ ನೀಡಲು ಇಂಧನ ಇಲಾಖೆ ಉದ್ದೇಶಿಸಿದೆ. ಇದರ ಸಾಧಕ–ಬಾಧಕಗಳ ಬಗ್ಗೆ ಅಧ್ಯಯನ ನಡೆದಿದ್ದು, ಸದ್ಯದಲ್ಲೇ ಈ ವಿಷಯ ಸಚಿವ ಸಂಪುಟದ ಮುಂದೆ ಬರಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.