ADVERTISEMENT

Cafe Blast: ಸ್ಫೋಟ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು: ಮಹಿಳೆ ಚಿಂತಾಜನಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 9:54 IST
Last Updated 1 ಮಾರ್ಚ್ 2024, 9:54 IST
<div class="paragraphs"><p>ಸ್ಫೋಟ ಸಂಭವಿಸಿದ್ದ ಸ್ಥಳ</p><p></p></div>

ಸ್ಫೋಟ ಸಂಭವಿಸಿದ್ದ ಸ್ಥಳ

   

ಬೆಂಗಳೂರು: ಬ್ರೂಕ್‌ಫೀಲ್ಡ್‌ ಕುಂದಲನಹಳ್ಳಿ ಮುಖ್ಯರಸ್ತೆಯಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಉಂಟಾಗಿರುವ ನಿಗೂಢ ಸ್ಫೋಟದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಕೆಲ ಅನುಮಾನಾಸ್ಪದ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ.

ADVERTISEMENT

ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದ ಬಗ್ಗೆ ಆರಂಭದಲ್ಲಿ ಮಾಹಿತಿ ಲಭ್ಯವಾಗಿತ್ತು. ಆದರೆ, ಸಿಲಿಂಡರ್‌ಗಳು ಹಾಗೂ ಸಂಪರ್ಕದ ಪೈಪ್‌ಗಳು ಕೆಫೆಯ ಹೊರಗಿನ ಭಾಗದಲ್ಲಿ ಯಥಾಸ್ಥಿತಿಯಲ್ಲಿವೆ. ಹೀಗಾಗಿ, ಸ್ಫೋಟದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಶುಕ್ರವಾರ ಮಧ್ಯಾಹ್ನ ಕೆಫೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಒಂದೇ ಕಂಪನಿಯ ಐವರು ಸಿಬ್ಬಂದಿ ಒಂದೇ ಸ್ಥಳದಲ್ಲಿ ಕುಳಿತು ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ 2 ಬಾರಿ ಸ್ಫೋಟ ಸಂಭವಿಸಿ, ದೊಡ್ಡ ಶಬ್ದ ಕೇಳಿಸಿತ್ತು. ಕೆಲ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಗಾಯಾಳುಗಳನ್ನು ರಕ್ಷಿಸಿರುವ ಸ್ಥಳೀಯರು, ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ.

ನಾಲ್ವರು ಗ್ರಾಹಕರು ಹಾಗೂ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಮಹಿಳೆ ಸ್ವರ್ಣಾ ನಾರಾಯಣಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ದೇಹದ ಶೇ 40ರಷ್ಟು ಸುಟ್ಟಿದೆ. ಮುಖ ಹಾಗೂ ಕಿವಿ ಭಾಗದಲ್ಲೂ ತೀವ್ರ ಗಾಯವಾಗಿದೆ. ಇವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಅನುಮಾನಾಸ್ಪದ ವಸ್ತುಗಳು: ‘ಸ್ಫೋಟ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು ಸಿಕ್ಕಿವೆ. ಯಾವ ರೀತಿ ಸ್ಫೋಟ ಆಯಿತು? ಸ್ಫೋಟಕ್ಕೆ ಕಾರಣವೇನು ? ಎಂಬುದು ಪರಿಶೀಲನೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ಕೆಫೆ ಹಾಗೂ ಸುತ್ತಮುತ್ತ ಪರಿಶೀಲನೆ ನಡೆಸಿ ಕೆಲ ಮಾದರಿಗಳನ್ನು ಸಂಗ್ರಹಿಸಿದ್ದಾರೆ.


ಅನುಮಾನಾಸ್ಪದ ವ್ಯಕ್ತಿಗಳು: ‘ಕೆಫೆಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಗಳು ಓಡಾಡಿದ್ದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕೆಫೆ ಮಾಲೀಕರು ಮಾಹಿತಿ ನೀಡಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಅವರು ಯಾರು ಎಂಬುದನ್ನು ತಿಳಿಯಲಾಗುತ್ತಿದೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.