ADVERTISEMENT

‘ನಗರದಲ್ಲೇ ಕೈಗಾರಿಕೆ ಏಕೆ’?

ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:22 IST
Last Updated 23 ಜನವರಿ 2019, 19:22 IST
   

ನವದೆಹಲಿ: ‘ನೀರು ಮತ್ತು ರಸ್ತೆಯಂತಹ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಬೆಂಗಳೂರಿನ ಮಧ್ಯ ಭಾಗದಲ್ಲಿಯೇ ಕೈಗಾರಿಕೆಗನ್ನು ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ನೀಡಿರುವುದಾದರೂ ಏಕೆ’ ಎಂದು ಸುಪ್ರೀಂ ಕೋರ್ಟ್‌ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಬಫರ್ ವಲಯದ ಮಿತಿ ಹೆಚ್ಚಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಆದೇಶದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ ಬುಧವಾರ ನಡೆಸಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರನ್ನು ಈ ಕುರಿತು ಪ್ರಶ್ನಿಸಿತು.

‘ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌)ವು ನಗರ ಪ್ರದೇಶಗಳನ್ನು ಹೊರತುಪಡಿಸಿದ ಪ್ರದೇಶಕ್ಕೆ ಸೀಮಿತವಾಗಬೇಕು. ಆದರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿ
ವೃದ್ಧಿ ಮಂಡಳಿ (ಕೆಐಎಡಿಬಿ)ಯು ನಗರ ವ್ಯಾಪ್ತಿಯಲ್ಲಿಯೇ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಏಕೆ. ಅಲ್ಲಿ ರಸ್ತೆಗಳಾದರೂ ಎಲ್ಲಿವೆ’ ಎಂದು ನ್ಯಾಯಪೀಠ ಕೇಳಿತು.

ADVERTISEMENT

ನಗರ ವ್ಯಾಪ್ತಿಯಲ್ಲಿ ಟೆಕ್‌ ಪಾರ್ಕ್‌ ಆರಂಭಿಸಲಾಗಿದೆ. ಕೆಲವು ಕೈಗಾರಿಕೆಗಳು ಹಾಗೂ ಅವುಗಳ ಪ್ರಮುಖ ಕಚೇರಿಯನ್ನು ಈ ಪಾರ್ಕ್‌ ಒಳಗೊಂಡಿದೆ ಎಂದು ಹೊಳ್ಳ ಅವರು ಪೀಠಕ್ಕೆ ವಿವರಿಸಿದರಾದರೂ, ‘ಕೈಗಾರಿಕೆಗಳನ್ನು ನಗರದ ಹೊರ ವಲಯದಲ್ಲಿರುವ ತುಮಕೂರು ರಸ್ತೆಗೆ ಏಕೆ ಸ್ಥಳಾಂತರಿಸಬಾರದು’ ಎಂದು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಪ್ರಶ್ನಿಸಿದರು.

ನಗರದ ಮಧ್ಯ ಭಾಗದಲ್ಲೇ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಲಾಗಿತ್ತು. ಇದೀಗ ಅವುಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯವಾಗಿ ನಗರದಲ್ಲಿನ ಕೆರೆಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೊಳ್ಳ ಹೇಳಿದರು.

ಸರ್ಕಾರವು ರಿಯಲ್ ಎಸ್ಟೇಟ್ ಕಂಪೆನಿಗಳ ಪರ ವಹಿಸಬಾರದು. ಬದಲಿಗೆ, ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸ್ವಯಂ ಸೇವಾ ಸಂಸ್ಥೆ ಫಾರ್ವರ್ಡ್‌ ಫೌಂಡೇಷನ್‌ ಪರ ವಾದ ಮಂಡಿಸಿದ ವಕೀಲ ಸಜನ್‌ ಪೂವಯ್ಯ, ‘ಆಯಾ ಕೆರೆಗಳ ವಿಸ್ತಾರಕ್ಕೆ ಅನುಗುಣವಾಗಿ ಬಫರ್‌ ವಲಯದ ಮಿತಿಯನ್ನು ನಿಗದಿಪಡಿಸಬೇಕು ಎಂದು ಕೆರೆಗಳ ಸ್ಥಿತಿಗತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ನ್ಯಾಯಮೂರ್ತಿ ಎನ್‌.ಕೆ. ಪಾಟೀಲ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ’ ಎಂದರು.

ಬಫರ್ ವಲಯದ ಮಿತಿಯನ್ನು ನಿಗದಿಗೊಳಿಸುವ ಕಾರ್ಯವನ್ನು ಶಾಸನ ರೂಪಿಸುವವರಿಗೇ ವಹಿಸಲಾಗುವುದು ಎಂದು ಪೀಠ ಸುಳಿವು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.