ಬೆಂಗಳೂರು: ‘ದೇಶದ ಬಹುಸಂಖ್ಯಾತರ ಭಾಷೆ ಹಿಂದೂಸ್ತಾನಿ ಆಗಿದೆ. ಇದು ನೊಯ್ಡಾ ಮೂಲದ ಮಾಧ್ಯಮಗಳಲ್ಲಿ ಕಾಣುವುದಿಲ್ಲ’ ಎಂದು ಲೇಖಕಿ ರಕ್ಷಂದಾ ಜಲೀಲ್ ಹೇಳಿದರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ನಡೆದ ‘ಹಿಂದಿ ಮತ್ತು ಹಿಂದೂಸ್ತಾನಿ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಹಿಂದಿ ಮತ್ತು ಉರ್ದು ಮಿಶ್ರಿತ ಭಾಷೆಯನ್ನು ಹಿಂದೂಸ್ತಾನಿ ಎಂದು ಕರೆಯಬಹುದು. ಇದು ಬಾಲಿವುಡ್ ಸಿನೆಮಾ ರಂಗದಲ್ಲಿ ಛಾಪು ಮೂಡಿಸಿದೆ. ಮಾಧ್ಯಮಗಳಲ್ಲಿ, ಸಾರ್ವಜನಿಕರ ಆಡುಮಾತುಗಳಲ್ಲಿಯೂ ಇದು ಹೆಚ್ಚು ಬಳಕೆಯಲ್ಲಿದೆ. ಲೇಖಕರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಸಾಹಿತ್ಯ ರಚಿಸಿದರೂ, ಈ ಎರಡು ಭಾಷೆಗಳನ್ನು ಸಮನಾಂತರವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಹಿಂದಿ ಮತ್ತು ಉರ್ದು ಭಾಷೆಯ ಪದಗಳಲ್ಲಿ, ಶಬ್ದಕೋಶಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಸಾಹಿತ್ಯ ರಚನೆಯಲ್ಲಿಯೂ ವ್ಯತ್ಯಾಸವಿದೆ. ಉರ್ದು ಭಾಷೆಯನ್ನು ತಿಳಿದುಕೊಳ್ಳಬೇಕದಾರೆ ಅದರ ಲಿಪಿಯನ್ನು ಅರ್ಥೈಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಈ ಗೋಷ್ಠಿಗೆ ಹಿಂದಿ, ಉರ್ದು ಮತ್ತು ಹಿಂದೂಸ್ತಾನಿ ಎಂಬ ಶೀರ್ಷಿಕೆ ನೀಡಬೇಕಿತ್ತು. ಭಾಷೆಗಳ ಬಳಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಹಿಂದೂಸ್ತಾನಿಯೊಳಗೆ ಉರ್ದುವನ್ನೂ ಸೇರಿಸಿದ್ದರೆ ಇದಕ್ಕೆ ಇನ್ನಷ್ಟೂ ಮೆರಗು ಬರುತ್ತಿತ್ತು’ ಎಂದು ಹೇಳಿದರು.
ಲೇಖಕ ಚಂದನ್ ಪಾಂಡೆ ಮಾತನಾಡಿ, ‘ಹಿಂದಿ ಮತ್ತು ಉರ್ದು ಭಾಷೆಗಳ ಸಂಘರ್ಷದಲ್ಲಿ ಭೋಜಪುರಿ, ಅವಧ್ ಸೇರಿದಂತೆ ಸ್ಥಳೀಯ ಭಾಷೆಗಳಿಗೆ ಹೆಚ್ಚು ಪ್ರಾಮುಖ್ಯ ದೊರೆಯುತ್ತಿಲ್ಲ. ಭಾಷೆ ಎಂದರೆ ಅದು ಪದಗಳ ಗುಚ್ಚವಾಗಿದೆ. ಅದು ಜನರ ನಂಬಿಕೆಯನ್ನು ಪ್ರತಿನಿಧಿಸುತ್ತದೆ’ ಎಂದು ಹೇಳಿದರು.
ಮನಿಷಾ ಪಾಂಡೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.