ಪ್ರಾತಿನಿಧಿಕ ಚಿತ್ರ – ರಾಯಿಟರ್ಸ್
ಬೆಂಗಳೂರು: ‘ಕಲೆ, ಸಂಗೀತ, ಸಾಹಿತ್ಯಕ್ಕೂ ಕೃತಕ ಬುದ್ಧಿಮತ್ತೆ (ಎಐ) ಬಳಕೆಯಾದರೆ ಕಲಾವಿದರು ಮತ್ತು ಸಾಹಿತಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲವೇ? ಸೃಜನಶೀಲ ಕ್ಷೇತ್ರಕ್ಕೆ ಎಐ ಮಾರಕವಾಗುವುದಿಲ್ಲವೇ...?’.
ಬೆಂಗಳೂರು ಸಾಹಿತ್ಯ ಉತ್ಸವದ ಮೊದಲ ದಿನದ, ‘ಎಐ ಫ್ಯಾಕ್ಟ್ ಟು ಎಐ ಫಿಕ್ಷನ್’ ಗೋಷ್ಠಿಯಲ್ಲಿ ಸಭಿಕರೊಬ್ಬರು ಎತ್ತಿದ ಪ್ರಶ್ನೆ ಇದು.
ವೇದಿಕೆಯಲ್ಲಿದ್ದ ಎಲ್ಲ ಸಂಪನ್ಮೂಲ ವ್ಯಕ್ತಿಗಳತ್ತಲೂ ಎಸೆದ ಈ ಪ್ರಶ್ನೆಗೆ, ಕಾದಂಬರಿಕಾರ್ತಿ ಲಾವಣ್ಯ ಲಕ್ಷ್ಮೀನಾರಾಯಣ್ ಉತ್ತರಿಸಿದರು. ‘ಸೃಜನಶೀಲ ಕ್ಷೇತ್ರಕ್ಕೆ ಎಐ ತಂದೊಡ್ಡಿರುವ ದೊಡ್ಡ ತೊಡಕು ಇದೆ. ಇದಕ್ಕೊಂದು ನಿಯಂತ್ರಣ ಇರಲೇಬೇಕು’ ಎಂದು ಅಭಿಪ್ರಾಯಪಟ್ಟರು.
‘ಹಿಂದಿನ ಕಲಾಕೃತಿಗಳನ್ನು ಅಧ್ಯಯನ ಮಾಡಿದ್ದರೂ ಕಲಾವಿದರು ಮತ್ತು ಬರಹಗಾರರ ಕೃತಿಗಳಲ್ಲಿ ಅವರದ್ದೇ ಆದ ಒಂದು ವಿಶೇಷ ಇರುತ್ತದೆ. ಅಲ್ಲದೆ ಅವರ ದೈನಂದಿನ ಜೀವನದ ಹಲವು ಅಂಶಗಳು ಕೃತಿ ರಚನೆಯಲ್ಲಿ ಪ್ರಭಾವ ಬೀರಿರುತ್ತವೆ’ ಎಂದರು.
‘ಆದರೆ ಕೇವಲ ಹಿಂದಿನ ಕೃತಿಗಳ ಪರಿಶೀಲನೆಯಿಂದ ಎಐ ರಚಿಸುವ ಕೃತಿಯಲ್ಲಿ ಈ ಎಲ್ಲಾ ಅಂಶಗಳೂ ಪ್ರಭಾವ ಬೀರಿರುವುದಿಲ್ಲ. ಬದಲಿಗೆ ಅತ್ಯಂತ ತ್ವರಿತವಾಗಿ ಕೃತಿಯೊಂದನ್ನು ರಚಿಸಿಬಿಡುತ್ತದೆ. ಕಥಾ ಎಳೆಯನ್ನು ಸೂಚಿಸಿ ಒಂದು ರಾತ್ರಿಯೊಳಗೆ ಕಾದಂಬರಿ ಬರೆದುಕೊಡು ಎಂದು ಹೇಳಿದರೆ, ಬೆಳಗಾಗುವುದರೊಳಗೆ ಕಾದಂಬರಿ ರಚಿಸಿಕೊಡುತ್ತದೆ. ಎಲ್ಲರೂ ಇದನ್ನೇ ಅವಲಂಬಿಸತೊಡಗಿದರೆ ಖಂಡಿತವಾಗಿಯೂ ಕಲಾವಿದರಿಗೆ ಮತ್ತು ಬರಹಗಾರರ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.