ADVERTISEMENT

‘ವೇಶ್ಯಾವಾಟಿಕೆ–ಆಸಾಮಿಗಳನ್ನು ಶಿಕ್ಷಿಸುವಂತಿಲ್ಲ’

‘ಶಿಕ್ಷೆಗೆ ಒಳಪಡಿಸಲು ದಂಡನೀಯ ಕಾನೂನು ಅಡಿಯಲ್ಲಿ ಅವಕಾಶ ಇಲ್ಲ’

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:13 IST
Last Updated 18 ಮೇ 2019, 20:13 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮಾನವ ಕಳ್ಳಸಾಗಣೆ ತಡೆ ಕಾಯ್ದೆ ಅಡಿಯಲ್ಲಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ ಮತ್ತು ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಸಜ್ಜುಗೊಳಿಸುವವರು ಮಾತ್ರವೇ ಶಿಕ್ಷೆಗೆ ಒಳಪಡುತ್ತಾರೆ ಹೊರತು ಲೈಂಗಿಕ ಬಯಕೆ ತೀರಿಸಿಕೊಳ್ಳಲು ಹೋದ ಆಸಾಮಿಯನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶವಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

2015ರಲ್ಲಿ ವೇಶ್ಯಾಗೃಹವೊಂದರ ಮೇಲೆ ದಾಳಿ ನಡೆಸಿದ್ದ ಸಂಜಯ ನಗರ ಠಾಣೆ ಪೊಲೀಸರು, ಸ್ಥಳದಲ್ಲಿದ್ದ ಆಸಾಮಿಯೊಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 370 ಹಾಗೂ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆ–1956ರ ಕಲಂ 3,4,5 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿದ್ದ ಈ ಆರೋಪಿ ವಿರುದ್ಧ ನಗರದ ವಿಚಾರಣಾ ನ್ಯಾಯಾಯಲಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಪ್ರಕರಣದ ರದ್ದು ಕೋರಿ ಆರೋಪಿಯು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೀಗ ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣವನ್ನು ವಜಾಗೊಳಿಸಿದೆ.

ADVERTISEMENT

‘ಆಸಾಮಿಯ ಕೃತ್ಯವು ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡುವಂತಿದ್ದರೂ ಆತನನ್ನು ಶಿಕ್ಷೆಗೆ ಒಳಪಡಿಸಲು ಲಭ್ಯವಿರುವ ದಂಡನೀಯ ಕಾನೂನು ಅಡಿಯಲ್ಲಿ ಅವಕಾಶವಿರುವುದಿಲ್ಲ’ ಎಂದು ಹೇಳಿದೆ.

‘ಆಸಾಮಿಗಳು ಆಪಾದಿತರಲ್ಲ ಎಂದು, ಸಿ.ಮಹದೇವ ಮತ್ತು ಇತರರು v/s ಕರ್ನಾಟಕ ಸರ್ಕಾರ, ಪರ್ವೇಶ್‌ ಛತ್ರಿ v/s ಕರ್ನಾಟಕ ಸರ್ಕಾರ, ಅಶ್ವತ್ಥ v/s ಕರ್ನಾಟಕ ಸರ್ಕಾರ, ಮೊಹಮದ್‌ ರಫಿ v/s ಕರ್ನಾಟಕ ಸರ್ಕಾರ ಹಾಗೂ ಸೇಂಥಿಲ್‌ ಕುಮಾರ್‌ v/s ಕರ್ನಾಟಕ ಸರ್ಕಾರದ ಕ್ರಿಮಿನಲ್‌ ಪ್ರಕರಣಗಳಲ್ಲಿ ಹೈಕೋರ್ಟ್‌ ಈಗಾಗಲೇ ಈ ಕುರಿತು ತೀರ್ಪು ನೀಡಿದೆ’ ಎಂದೂ ನ್ಯಾಯಪೀಠ ವಿವರಿಸಿದೆ.

‘ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಹೊರಿಸಲಾಗಿರುವ ಆಪಾದನೆಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಹೀಗಾಗಿ ಅರ್ಜಿದಾರರ ವಿರುದ್ಧ ಅಧೀನ ನ್ಯಾಯಾಲಯ ವಿಚಾರಣೆ ಮುಂದುವರಿಸುವುದರೆ ಅದು, ಕಾನೂನನ್ನು ದುರುಪಯೋಗ ಪಡಿಸಿಕೊಂಡಂತೆ ಆಗುತ್ತದೆ’ ಎಂದೂ ನ್ಯಾಯಪೀಠ ತಿಳಿಸಿದೆ.

ಪೂರ್ವ ನಿದರ್ಶನಗಳ ರಕ್ಷಣೆ : ‘ವೇಶ್ಯಾವಾಟಿಕೆ ಗೃಹಗಳಿಗೆ ಮಹಿಳೆಯರನ್ನು ಪೂರೈಕೆ ಮಾಡುವವರಿಗೆ, ಆ ಕೃತ್ಯ ನಡೆಯುವುದಕ್ಕೆ ಅವಕಾಶ ಮಾಡಿಕೊಡುವವರಿಗೆ, ಕಾಂಡೋಮ್‌, ಹಾಸಿಗೆ ಮಂಚ... ಸೇರಿದಂತೆ ಪೂರಕ ವ್ಯವಸ್ಥೆ ಸಜ್ಜುಗೊಳಿಸುವವರನ್ನು ಮಾತ್ರವೇ ಕಾನೂನಿನ ಅನ್ವಯ ಶಿಕ್ಷೆಗೆ ಒಳಪಡಿಸಬಹುದು ಎಂಬುದರ ಪೂರ್ವ ನಿದರ್ಶನದ ತೀರ್ಪುಗಳು ಆಸಾಮಿಗಳಿಗೆ ವರವಾಗಿ ಪರಿಣಮಿಸಿದೆ’ ಎನ್ನುತ್ತಾರೆ ಪ್ರಾಸಿಕ್ಯೂಷನ್‌ ಪರ ವಕೀಲರು.

ಆಸಾಮಿಗಳೂ ಕುಮ್ಮಕ್ಕು ನೀಡುವವರು’

‘ದಂಧೆಗೆ ಕುಮ್ಮಕ್ಕು ನೀಡುವವರು ಎಂದು ಆಸಾಮಿಗಳನ್ನು ಶಿಕ್ಷೆಗೆ ಗುರಿಪಡಿಸಬಹುದು. ಆದರೆ, ಸೂಕ್ಷ್ಮ ಅಂಶಗಳ ನೆರಳಿನಲ್ಲಿ ಆಪಾದನೆಗೆ ಒಳಗಾದ ಆಸಾಮಿಗಳು ಕಾನೂನಿನ ರಕ್ಷಣೆ ಪಡೆಯುವ ಮೂಲಕ ಬಚಾವಾಗುತ್ತಿದ್ದಾರೆ’ ಎಂದು ರಾಜ್ಯ ಪ್ರಾಸಿಕ್ಯೂಟರ್ ಎಸ್‌.ರಾಚಯ್ಯ ಪ್ರತಿಪಾದಿಸುತ್ತಾರೆ.

‘ಈ ಅಂಶವನ್ನು ನಾನು ಬೇರೊಂದು ಪ್ರಕರಣದಲ್ಲಿ ಏಕಸದಸ್ಯ ನ್ಯಾಯಪೀಠದ ಗಮನಕ್ಕೆ ತಂದಿದ್ದೆ. ಆದರೆ ನ್ಯಾಯಪೀಠ, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಹೋರಾಟ ಮಾಡಿ ಎಂದು ತಿಳಿಸಿತ್ತು’ ಎಂದೂ ಅವರು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.