ADVERTISEMENT

ಬೆಂಗಳೂರು ರೇಸ್‌ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:35 IST
Last Updated 15 ಮೇ 2025, 16:35 IST

ಬೆಂಗಳೂರು: ಉದ್ಯಾನನಗರಿಯಲ್ಲಿ ಈ ವರ್ಷದ ‘ಬೆಂಗಳೂರು ಬೇಸಿಗೆ ರೇಸ್‌’ಗಳು ಶನಿವಾರದಿಂದ ಆರಂಭವಾಗಲಿವೆ. ಈ ಬಾರಿ ಒಟ್ಟು 24 ರೇಸ್‌ ದಿನಗಳನ್ನು ನಿಗದಿಪಡಿಸಲಾಗಿದೆ. ಈ ಋತುವು ಆಗಸ್ಟ್ 1ರಂದು ಮುಕ್ತಾಯಗೊಳ್ಳಲಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಟರ್ಫ್‌ ಕ್ಲಬ್‌ ಅಧ್ಯಕ್ಷ ಹಾಗೂ ಹಿರಿಯ ಸ್ಟೀವರ್ಡ್‌ ಆರ್‌.ಮಂಜುನಾಥ್‌ ರಮೇಶ್‌, ‘ಟ್ರೋಫಿಗಳು ಸೇರಿದಂತೆ ಒಟ್ಟು ಬಹುಮಾನದ ಮೊತ್ತಕ್ಕೆ ಸುಮಾರು ₹18 ಕೋಟಿ ವಿನಿಯೋಗವಾಗಲಿದೆ’ ಎಂದರು. 

‘ಪ್ರತಿಷ್ಠಿತ ಎಚ್‌.ಪಿ.ಎಸ್‌.ಎಲ್‌ ಬೆಂಗಳೂರು ಬೇಸಿಗೆ ಡರ್ಬಿ ರೇಸ್‌ ಜುಲೈ 13ರಂದು ನಡೆಯಲಿದೆ. ಎಚ್‌.ಪಿ.ಎಸ್‌.ಎಲ್‌ ಸಂಸ್ಥೆಯ ಸುರೇಶ್‌ ಪಾಲಡುಗು  ಅವರು ಡರ್ಬಿಯನ್ನು ಪ್ರಾಯೋಜಿಸುತ್ತಿದ್ದಾರೆ. ಡರ್ಬಿಯ ಒಟ್ಟು ಬಹುಮಾನದ ಮೊತ್ತ ಸುಮಾರು ₹2 ಕೋಟಿ ಇದ್ದು, ಬಿಟಿಸಿ ಮತ್ತು ಎಚ್‌.ಪಿ.ಎಸ್‌.ಎಲ್‌ ಸಂಸ್ಥೆಯು ತಲಾ ₹1 ಕೋಟಿ ನೀಡಲಿವೆ’ ಎಂದು ಅವರು ತಿಳಿಸಿದರು.

ADVERTISEMENT

‘ಇತರೆ ಪ್ರಮುಖ ರೇಸ್‌ಗಳನ್ನು ಪ್ರಾಯೋಜಿಸಲು ಕೆಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಆಸಕ್ತಿ ತೋರಿವೆ. ಅವುಗಳಲ್ಲಿ ಡಾರಿಯಸ್‌ ಬೈರಾಮ್ಜಿ, ಹೂವ್ಸ್‌ ಓ ಸ್ಟೀಲ್‌ ಮಿಲಿಯನ್‌, ಕೊರೊಮಂಡಲ್‌ ಗ್ರೊಮೊರ್‌ ಮತ್ತು ಫೈವ್‌ ಸ್ಟಾರ್‌ ಶಿಪ್ಪಿಂಗ್‌ ಕಂಪನಿ ಪ್ರಮುಖರಾಗಿದ್ದಾರೆ’ ಎಂದರು.

ಈ ಅವಧಿಯಲ್ಲಿ ಸುಮಾರು 168 ರೇಸ್‌ಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.  ಇತರೆ ರೇಸ್‌ ಕೇಂದ್ರಗಳಿಂದ ಬಂದಿರುವ ಸುಮಾರು 30 ಟ್ರೈನರ್‌ಗಳ ತರಬೇತಿಯಲ್ಲಿರುವ ಹೊರಪ್ರದೇಶದ 202 ಕುದುರೆಗಳು ಸೇರಿದಂತೆ  ಒಟ್ಟು 799 ಅಶ್ವಗಳು ಸ್ಫರ್ಧಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇದೇ ಮೊದಲ ಬಾರಿಗೆ 1300 ಮತ್ತು 1500 ಮೀಟರ್ಸ್‌ ರೇಸ್‌ಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ ಎಂದು ಆರ್‌.ಮಂಜುನಾಥ್‌ ರಮೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.