ADVERTISEMENT

ಮಳೆ: ಮುನ್ನೆಚ್ಚರಿಕೆ ವಹಿಸಲು ಸೂಚನೆ

ಪಾಲಿಕೆ ವಲಯ ಆಯುಕ್ತರು, ಜಂಟಿ ಆಯುಕ್ತರೊಂದಿಗೆ ಮುಖ್ಯ ಆಯುಕ್ತರ ಸಭೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 16:44 IST
Last Updated 5 ಅಕ್ಟೋಬರ್ 2021, 16:44 IST
ಗೌರವ್ ಗುಪ್ತ
ಗೌರವ್ ಗುಪ್ತ   

ಬೆಂಗಳೂರು: ಮಳೆಗಾಲದಲ್ಲಿ ರಾಜಕಾಲುವೆ ನೀರು ಉಕ್ಕುವ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭಾನುವಾರ ರಾತ್ರಿ ಸುರಿದ ಮಳೆಯಿಂದ ಆಗಿರುವ ಅವಾಂತರಗಳ ಕುರಿತು ಸಭೆ ನಡೆಸಿದ ಅವರು, ‘ಮಳೆ ಬೀಳುವ ಮುನ್ಸೂಚನೆ ಇದ್ದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಳೆ ಸಾಧಾರಣವಾಗಿದ್ದರೆ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತದೆ. ಭಾನುವಾರ ಅಸಾಧಾರಣವಾಗಿ ಮಳೆ ಸುರಿದಿದ್ದರಿಂದ ಸಮಸ್ಯೆ ಆಗಿದೆ. 750 ರಾಜಕಾಲುವೆಗಳಲ್ಲಿ ಶೇ 50ರಷ್ಟು ಕಾಲುವೆಗಳನ್ನು ಎತ್ತರಿಸುವ ಕೆಲಸ 15 ವರ್ಷಗಳಲ್ಲಿ ಆಗಿದೆ. ಮುಂದಿನ ದಿನಗಳಲ್ಲೂ ಅನುದಾನದ ಲಭ್ಯತೆ ನೋಡಿಕೊಂಡು ಈ ಕೆಲಸ ಮುಂದುವರಿಯಲಿದೆ’ ಎಂದರು.

ADVERTISEMENT

‘ಭಾನುವಾರದ ಮಳೆಗೆ ರಾಜರಾಜೇಶ್ವರಿನಗರ ಮತ್ತು ಪಶ್ಚಿಮ ವಲಯದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಇರುವ ಕಡೆ ರಾಜಕಾಲುವೆ ತಡೆಗೋಡೆಗಳನ್ನು ಎತ್ತರಿಸಲಾಗುವುದು’ ಎಂದು ಹೇಳಿದರು.

ಜೋರು ಮಳೆ ಬಂದರೆ ನೀರು ನುಗ್ಗುವ ಜಾಗವನ್ನು ಅಧಿಕಾರಿಗಳು ಗುರುತಿಸಿಕೊಂಡಿರುತ್ತಾರೆ. 585 ಕಡೆ ಈ ರೀತಿಯ ಅಪಾಯದ ಸ್ಥಳಗಳನ್ನು ಗುರುತು ಮಾಡಲಾಗಿತ್ತು. ತಡೆಗೋಡೆ ಎತ್ತರಿಸುವ ಕೆಲಸ ಮಾಡಲಾಗುತ್ತಿದ್ದು, ಸದ್ಯ ಅವುಗಳ ಸಂಖ್ಯೆ 185ಕ್ಕೆ ಇಳಿದಿದೆ ಎಂದು ವಿವರಿಸಿದರು.

‘ಮನೆಗಳಿಗೆ ನೀರು ಮತ್ತು ಕೆಸರು ಮಣ್ಣು ತುಂಬಿಕೊಂಡು ಆಗಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳು ಮನೆ– ಮನೆಗೆ ಭೇಟಿ ನೀಡಿ ಸರ್ವೆ ನಡೆಸುತ್ತಿದ್ದಾರೆ. ಎಷ್ಟು ನಷ್ಟವಾಗಿದೆ, ಎಷ್ಟು ಪರಿಹಾರ ನೀಡಬೇಕು ಎಂಬುದರ ಕುರಿತು ವರದಿ ಸಲ್ಲಿಸಲಿದ್ದಾರೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಕೆಲವೆಡೆ ಮಳೆ ನೀರು ನಿಲ್ಲುವುದರಿಂದ ಸಮಸ್ಯೆ ಆಗುತ್ತಿದೆ. ಗುಂಡಿ ಮುಚ್ಚಲು ಆದ್ಯತೆ ವಹಿಸಿ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಫ್ಲೆಕ್ಸ್ ಅಳವಡಿಸಿದರೆ ನಿರ್ದಾಕ್ಷಿಣ್ಯ ಕ್ರಮ’

ನಗರದಲ್ಲಿ ಫ್ಲೆಕ್ಸ್ ಅಳವಡಿಕೆ ನಿಷೇಧಿಸಲಾಗಿದೆ. ಆದರೂ ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.

‘ಯಾರೇ ಫ್ಲೆಕ್ಸ್ ಅಳವಡಿಸಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ರಾಜರಾಜೇಶ್ವರಿನಗರದಲ್ಲಿ ಶಾಸಕರೇ ಅಳವಡಿಸಿದ್ದರೆ ಪರಿಶೀಲನೆ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಲಸಿಕೆಗಾಗಿ ಕಾಯುತ್ತಿದ್ದೇವೆ. ಮೊದಲ ಹಂತದಲ್ಲಿ 12ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಯೋಜನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.