ADVERTISEMENT

ನಗರದಲ್ಲಿ ಮತ್ತೆ ತಂಪೆರೆದ ಮಳೆ, ಹಲವೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:08 IST
Last Updated 25 ಮೇ 2019, 19:08 IST
ಮೆಜೆಸ್ಟಿಕ್‌ ಬಿಎಂಟಿಸಿ ಬಸ್‌ ನಿಲ್ದಾಣ ಜಲಾವೃತವಾಗಿತ್ತು
ಮೆಜೆಸ್ಟಿಕ್‌ ಬಿಎಂಟಿಸಿ ಬಸ್‌ ನಿಲ್ದಾಣ ಜಲಾವೃತವಾಗಿತ್ತು   

ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಪ್ರಬಲ ಸುಳಿಗಾಳಿಯ ಕಾರಣ ನಗರದಲ್ಲಿ ಶನಿವಾರ ರಾತ್ರಿ ಮುಂಗಾರು ಪೂರ್ವ ಮಳೆ ಮತ್ತೆ ಜೋರಾಗಿ ಸುರಿಯಿತು. ಬಿಸಿಲ ಬೇಗೆಯಿಂದ ಬಳಲಿದ್ದ ಜನತೆಗೆ ಸುಮಾರು ಒಂದು ಗಂಟೆ ಸುರಿದ ಮಳೆಯಿಂದಾಗಿ ತಂಪಿನ ಅನುಭವ ನೀಡಿತು.

ಬೆಳಿಗ್ಗೆ ತಾಪಮಾನ ಹೆಚ್ಚಿತ್ತು. ಮಧ್ಯಾಹ್ನದ ಹೊತ್ತಿಗೆ ನಿಧಾನಕ್ಕೆ ಬಿಸಿಲು ಕಡಿಮೆಯಾಗಿ, ಗಾಳಿ ಜೋರು ಪಡೆಯಿತು. ರಾತ್ರಿ ವೇಳೆಗೆ ಮಳೆಯ ಜೊತೆ ಗುಡುಗು ಮಿಂಚಿನ ಆರ್ಭಟ ಶುರುವಾಯಿತು. ಶಾಂತಿನಗರ, ವಿಲ್ಸನ್‌ ಗಾರ್ಡನ್‌, ಕೋಣನಕುಂಟೆ, ಬೇಗೂರು, ಅರಕೆರೆ, ಮೆಜೆಸ್ಟಿಕ್‌, ಹೊಯ್ಸಳನಗರ, ಸಂಪಂಗಿರಾಮನಗರ, ನಾಗರಬಾವಿ, ಎಚ್‌ಎಸ್‌ಆರ್‌ಬಡಾವಣೆ, ಹಲಸೂರು, ಯಶವಂತಪುರ, ಮಲ್ಲೆಶ್ವರ ಮುಂತಾದ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಿತು.

ಜೋರು ಮಳೆಯಿಂದಾಗಿ ಶಾಂತಿನಗರ, ಅರಕೆರೆ, ಬಿಳೇಕಹಳ್ಳಿ, ಸಂಪಂಗಿರಾಮನಗರ, ಸುಧಾಮನಗರ, ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯಿತು. ವಾಹನ ದಟ್ಟಣೆ ಉಂಟಾಗಿದ್ದರಿಂದ ಸವಾರರು ಮನೆಗೆ ತಲುಪಲು ಸಮಸ್ಯೆ ಎದುರಿಸಿದರು. ಮಳೆಯಿಂದ ತಪ್ಪಿಸಿಕೊಳ್ಳಲು ಮೆಟ್ರೊ ನಿಲ್ದಾಣ, ಅಂಗಡಿ–ಮುಂಗ್ಗಟ್ಟುಗಳ ಮುಂದೆ ಆಶ್ರಯ ಪಡೆದರು.

ADVERTISEMENT

ಮಳೆ ನೀರಿಗೆ ಚರಂಡಿ ನೀರು ಸೇರಿ ಮೆಜೆಸ್ಟಿಕ್‌ನ ಬಿಎಂಟಿಸಿ ನಿಲ್ದಾಣಕ್ಕೆ ನುಗ್ಗಿದ್ದರಿಂದ ನಿಲ್ದಾಣ ಹೊಳೆಯ ಸ್ವರೂಪ ಪಡೆಯಿತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣಕ್ಕೂ ನೀರು ನುಗ್ಗಿತು.

ವಿಲ್ಸನ್‌ ಗಾರ್ಡನ್‌ನಲ್ಲಿ ಮರ ಮುರಿದು ವಿದ್ಯುತ್‌ ತಂತಿ ಮೇಲೆ ಬಿದ್ದ ಪರಿಣಾಮ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಸಾರಕ್ಕಿ ಸಿಗ್ನಲ್‌ ಬಳಿ ಮರ ಮುರಿದು ಕಾರೊಂದರ ಮೇಲೆ ಬಿದ್ದ ಕಾರಣ ಆರ್‌.ಜೆ ಶ್ರುತಿ ಅವರ ಕಾರು ಜಖಂಗೊಂಡಿತು. ವಿಜಯನಗರ, ಆರ್‌ಪಿಸಿ ಬಡಾವಣೆ, ಕಮ್ಮನಹಳ್ಳಿ, ಜಯನಗರ, ಜೆ.ಪಿ.ನಗರ, ಮಣಿಪಾಲ ಸೆಂಟರ್‌ ಹಾಗೂ ಭಾಷ್ಯಂ ವೃತ್ತ ಸೇರಿದಂತೆ ನಗರದ 16 ಕಡೆ
ಗಳಲ್ಲಿ ಮರಗಳು ಧರೆಗೆ ಉರುಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.