ADVERTISEMENT

ರಸ್ತೆ ಗುಂಡಿ ಮುಚ್ಚಲು ಆದ್ಯತೆ ನೀಡಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 18:27 IST
Last Updated 15 ಸೆಪ್ಟೆಂಬರ್ 2025, 18:27 IST
ಚಿಕ್ಕಬೆಳ್ಳಂದೂರು ಕೆರೆಯಲ್ಲಿನ ಒತ್ತುವರಿಯನ್ನು ಬಿಡಬ್ಲ್ಯುಸಿಸಿ ಸಿಬ್ಬಂದಿ ತೆರವುಗೊಳಿಸಿದರು
ಚಿಕ್ಕಬೆಳ್ಳಂದೂರು ಕೆರೆಯಲ್ಲಿನ ಒತ್ತುವರಿಯನ್ನು ಬಿಡಬ್ಲ್ಯುಸಿಸಿ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚಿಸಿದರು.

ನಗರ ಪಾಲಿಕೆಗಳ ಅಧಿಕಾರಿಗಳು ಹಾಗೂ ಗುತ್ತಿಗೆದಾರರದೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ‘ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

ನಗರದಲ್ಲಿ ₹694 ಕೋಟಿ ವೆಚ್ಚದಲ್ಲಿ 349 ಕಿ.ಮೀ. ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವ ಕಡೆ ರಸ್ತೆ ಮೇಲೆ ನೀರು ನಿಲ್ಲದಂತೆ ಡಾಂಬರೀಕರಣ ಮಾಡಬೇಕು. ಡಾಂಬರೀಕರಣ ಕಾಮಗಾರಿಯನ್ನು ನವೆಂಬರ್‌ನೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘401 ಕಿ.ಮೀ. ಉದ್ದದ 178 ರಸ್ತೆಗಳು ದೋಷಮುಕ್ತ ಅವಧಿಯಲ್ಲಿದ್ದು (ಡಿ.ಎಲ್.ಪಿ), ಆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ, ಮೇಲ್ಮೈ ಪದರ ಹಾಳಾಗಿದ್ದರೆ ಗುತ್ತಿಗೆದಾರರೇ ಅದನ್ನು ದುರಸ್ತಿಪಡಿಸಬೇಕು. ಕಾಲಮಿತಿಯಲ್ಲಿ ಗುಂಡಿ ಮುಚ್ಚದಿದ್ದರೆ ಪಾಲಿಕೆಯಿಂದಲೇ ಅದನ್ನು ಮುಚ್ಚಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಕಟಾವು ಮಾಡಿಕೊಳ್ಳಬೇಕು’ ಎಂದರು.

‘552 ಕಿ.ಮೀ ಉದ್ದದ 188 ರಸ್ತೆಗಳು ಡಿಎಲ್‌ಪಿ ಅವಧಿ ಪೂರ್ಣಗೊಂಡಿದ್ದು, ಅದರಲ್ಲಿ 435 ಕಿ.ಮೀ ಉದ್ದದ 126 ರಸ್ತೆಗಳು ಸುಸ್ಥಿತಿಯಲ್ಲಿವೆ. ಉಳಿದ 116 ಕಿ.ಮೀ. ಉದ್ದದ 62 ರಸ್ತೆಗಳಲ್ಲಿ ಆಯಾ ಪಾಲಿಕೆಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದು ಹೇಳಿದರು.

‘ರಸ್ತೆಗಳು ಸುಸ್ಥಿತಿಯಲ್ಲಿರಬೇಕು. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಸಭೆ ಏರ್ಪಡಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಲಮಿತಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

ನಗರದಲ್ಲಿ 46 ಕಿ.ಮೀ. ಉದ್ದದ 11 ಹೈಡೆನ್ಸಿಟಿ ಕಾರಿಡಾರ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ರಮೇಶ್ ಡಿ.ಎಸ್, ಪೊಮ್ಮಲ ಸುನಿಲ್ ಕುಮಾರ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ,  ಹೆಚ್ಚುವರಿ ಆಯುಕ್ತರಾದ ಲತಾ ಆರ್, ಲೋಖಂಡೆ ಸ್ನೇಹಲ್ ಸುಧಾಕರ್, ದಿಗ್ವಿಜಯ್ ಬೋಡ್ಕೆ, ನವೀನ್ ಕುಮಾರ್ ರಾಜು ಉಪಸ್ಥಿತರಿದ್ದರು.

ಚಿಕ್ಕಬೆಳ್ಳಂದೂರು ಕೆರೆ ಒತ್ತುವರಿ ತೆರವು

ಮಹದೇವಪುರ ವ್ಯಾಪ್ತಿಯಲ್ಲಿರುವ ಚಿಕ್ಕಬೆಳ್ಳಂದೂರು ಗ್ರಾಮದ ಸರ್ವೆ ಸಂಖ್ಯೆ-9ರಲ್ಲಿರುವ ಚಿಕ್ಕಬೆಳ್ಳಂದೂರು ಕೆರೆಯ ಒಟ್ಟು ವಿಸ್ತೀರ್ಣ 67 ಎಕರೆ 14 ಗುಂಟೆಯಾಗಿದೆ. ಈ ಕೆರೆಯಲ್ಲಿ ಮೂರು ಗುಂಟೆ ಪೈಕಿ ಮೂರು ಗುಂಟೆ ವಿಸ್ತೀರ್ಣದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಡಬ್ಲ್ಯುಸಿಸಿ) ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದರು.

ಕಂದಾಯ ಇಲಾಖೆಯು ಚಿಕ್ಕಬೆಳ್ಳಂದೂರು ಕೆರೆ ಪ್ರದೇಶದಲ್ಲಿನ ಒತ್ತುವರಿ ಜಾಗವನ್ನು ಗುರುತಿಸಿ ಸರ್ವೆ ನಕ್ಷೆಯನ್ನು ನಗರ ಪಾಲಿಕೆಗೆ ನೀಡಿತ್ತು. ಅದರಂತೆ ನೋಟಿಸ್ ಮತ್ತು ಒತ್ತುವರಿ ತೆರವುಗೊಳಿಸಲು ಆದೇಶವನ್ನು ನೀಡಿದ್ದರೂ ಒತ್ತುವರಿದಾರರು ತೆರವು ಮಾಡಿರಲಿಲ್ಲ. ಕೆರೆ ಒತ್ತುವರಿ ಜಾಗವನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿ ವಶಕ್ಕೆ ಪಡೆಯಲು ನಗರ ಪಾಲಿಕೆಯ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿತ್ತು. ಚಿಕ್ಕಬೆಳ್ಳಂದೂರು ಕೆರೆಯಲ್ಲಿನ ಮೂರು ಗುಂಟೆ ಒತ್ತುವರಿಯನ್ನು ಸೋಮವಾರ ತೆರವುಗೊಳಿಸಲಾಯಿತು. ವಶಕ್ಕೆ ಪಡೆದಿರುವ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಮೇಶ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.