ADVERTISEMENT

ಬೆಂಗಳೂರು | ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 36 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:39 IST
Last Updated 24 ಅಕ್ಟೋಬರ್ 2025, 15:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಮದ್ಯಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ 36 ಚಾಲಕರ ವಿರುದ್ಧ ನಗರದ ಸಂಚಾರ ವಿಭಾಗದ ಪೊಲೀಸರು, ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಚಾಲಕರ ಚಾಲನಾ ಪರವಾನಗಿ (ಡಿ.ಎಲ್‌) ಅಮಾನತುಪಡಿಸುವಂತೆಯೂ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಚಾಲಕರು ಬೆಳಿಗ್ಗೆಯೇ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದಾರೆ ಎಂಬ ದೂರು ಬಂದಿತ್ತು. ಆ ದೂರು ಆಧರಿಸಿ, ಶುಕ್ರವಾರ ಬೆಳಿಗ್ಗೆ ದಿಢೀರನೇ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದರು.

ADVERTISEMENT

ಬೆಳಿಗ್ಗೆ 7ರಿಂದ 9.30ರ ವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ 5,881 ಶಾಲಾ ವಾಹನಗಳನ್ನು ತಡೆದು ಆಲ್ಕೊಮೀಟರ್ ಉಪಕರಣದ ಮೂಲಕ ಚಾಲಕರ ತಪಾಸಣೆ ಮಾಡಲಾಯಿತು. ಆ ಪೈಕಿ 36 ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂತು. ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಯಿತು ಎಂದು ಸಂಚಾರ ಪೊಲೀಸರು ಹೇಳಿದರು.

ಚಾಲಕರ ವಿರುದ್ಧ ಪಾನಮತ್ತ ಚಾಲನೆ ಮತ್ತು ಅಜಾಗರೂಕ ಚಾಲನೆ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. ತಪಾಸಣೆ ವೇಳೆ ಕಾರ್ಯಕ್ಷಮತೆ ಪ್ರಮಾಣಪತ್ರ (ಎಫ್.ಸಿ) ಹೊಂದಿರದ ವಾಹನಗಳನ್ನು ಜಪ್ತಿ ಮಾಡಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗೂ ನೋಟಿಸ್ ಜಾರಿ ಮಾಡಿ ಮಾಹಿತಿ ಕೇಳಿದ್ದೇವೆ. ಅವರು ನೀಡುವ ಮಾಹಿತಿ ಆಧರಿಸಿ ಸಾರಿಗೆ ಇಲಾಖೆಗೆ ವರದಿ ಕೊಡುತ್ತೇವೆ. ಕೆಲವು ಶಾಲೆಗಳು ಮಕ್ಕಳನ್ನು ಕರೆದೊಯ್ಯಲು ಖಾಸಗಿ ವಾಹನಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆಯೂ ಸಾರಿಗೆ ಇಲಾಖೆಗೆ ಮಾಹಿತಿ ನೀಡುತ್ತೇವೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.