ಬೆಂಗಳೂರು: ನಗರದಲ್ಲಿ ವಾಣಿಜ್ಯ ಮಳಿಗೆಗಳ ಮುಂದೆ ಒಂದಕ್ಕಿಂತ ಹೆಚ್ಚು ಜಾಹೀರಾತು ಫಲಕ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ.
ಒಂದಕ್ಕಿಂತ ಹೆಚ್ಚಿನ ಫಲಕಗಳನ್ನು ಅಳವಡಿಸಬೇಕಾದರೆ ಅದಕ್ಕೆ ಜಾಹೀರಾತು ನೀತಿಯಂತೆ ಅನುಮತಿ ಪಡೆಯಬೇಕಾಗುತ್ತದೆ.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸದಾಗಿ ಜಾರಿಗೆ ತಂದಿರುವ ಜಾಹೀರಾತು ನಿಯಮಾವಳಿಯಂತೆ ವಾಣಿಜ್ಯ ಮಳಿಗೆಯವರು ಒಂದಕ್ಕಿಂತ ಹೆಚ್ಚಿನ ಫಲಕ ಅಳವಡಿಸುವಂತಿಲ್ಲ. ಅನುಮತಿ ಪಡೆಯದೇ ಅಳವಡಿಸುವ ಎಲ್ಲಾ ಜಾಹೀರಾತು ಫಲಕಗಳು ಅನಧಿಕೃತವಾಗುತ್ತವೆ. ಹೀಗಾಗಿ, ವಾಣಿಜ್ಯ ಮಳಿಗೆ ಮಾಲೀಕರು ತಾವೇ ಎಲ್ಲಾ ರೀತಿಯ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಮಾಡಬೇಕು’ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಸೂಚಿಸಿದರು.
ಕೃಷ್ಣರಾಜಪುರ ವಲಯ ವ್ಯಾಪ್ತಿಯ ಹಳೆ ಮದ್ರಾಸ್ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿನ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಅಳವಡಿಸಲಾಗಿರುವ ಅನಧಿಕೃತ ಜಾಹೀರಾತು ಹೋರ್ಡಿಂಗ್ ಹಾಗೂ ಎಲ್‌ಇಡಿ ಜಾಹೀರಾತಿನ 17 ಫಲಕಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಶುಕ್ರವಾರ ತೆರವು ಮಾಡಲಾಯಿತು. ನಗರ ಪಾಲಿಕೆಯ ಎಂಜಿನಿಯರಿಂಗ್, ಕಂದಾಯ, ವಿದ್ಯುತ್ ಮತ್ತು ಆರೋಗ್ಯ ಇಲಾಖೆಯ ತಂಡವು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿತು ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 10ರಿಂದ ಬೆಳಗಿನ ಜಾವ 4ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದರು.
ನಗರದ ಸೌಂದರ್ಯ, ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನಧಿಕೃತ ಜಾಹೀರಾತುಗಳ ವಿರುದ್ಧ ಪ್ರತಿ ವಾರ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು. ಅನುಮತಿ ಪಡೆಯದೇ ಜಾಹೀರಾತು ಫಲಕಗಳನ್ನು ಅಳವಡಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ತೆರವು ಕಾರ್ಯಾಚರಣೆ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡನಾತ್ಮಕ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.