ADVERTISEMENT

ದಟ್ಟಣೆ ನಿಯಂತ್ರಣ: ಬೇಕಿದೆ ಸಮಗ್ರ ಯೋಜನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:29 IST
Last Updated 21 ನವೆಂಬರ್ 2018, 19:29 IST
ನಗರದ ರಸ್ತೆಗಳು ಮೇಲಿಂದ ಮೇಲೆ ಇಂತಹ ದಟ್ಟಣೆಗೆ ಸಾಕ್ಷಿಯಾಗುತ್ತವೆ
ನಗರದ ರಸ್ತೆಗಳು ಮೇಲಿಂದ ಮೇಲೆ ಇಂತಹ ದಟ್ಟಣೆಗೆ ಸಾಕ್ಷಿಯಾಗುತ್ತವೆ   

ಬೆಂಗಳೂರು: ‘ನಗರದಲ್ಲಿ ವಿಪರೀತ ಎನಿಸುವಷ್ಟು ಹೆಚ್ಚಿರುವ ವಾಹನ ದಟ್ಟಣೆ ನಿವಾರಣೆಗಾಗಿ ಸಮಗ್ರ ಯೋಜನೆ ರೂಪಿಸಬೇಕು’ ಎಂದು ರೈಟ್ಸ್‌ ಸಂಸ್ಥೆ ಹೇಳಿದೆ.

2008ರ ಬಳಿಕ ನಗರದ ವಾಹನಗಳ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆ ಆಗಿದೆ. ಸುಮಾರು 80 ಲಕ್ಷ ಸಮೀಪಿಸಿರುವ ವಾಹನಗಳ ಸಂಖ್ಯೆ, ಬೆಂಗಳೂರನ್ನು ದೇಶದ ಅತಿ ಹೆಚ್ಚು ದಟ್ಟಣೆಯಿಂದ ಕೂಡಿದ ನಗರವನ್ನಾಗಿಸಿದೆ.

‘170 ಕಿಲೋಮೀಟರ್‌ ವಿಸ್ತಾರದ ಮೆಟ್ರೊ ರೈಲು ಸಂಪರ್ಕ, 60 ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯ ಮಾನೊ ರೈಲು, ವರ್ತುಲ ರಸ್ತೆಗಳ ನಿರ್ಮಾಣದ ಮೂಲಕ ದಟ್ಟಣೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಂಸ್ಥೆಯ ಸಮೀಕ್ಷೆ ಹೇಳಿದೆ.

ADVERTISEMENT

ಕೋಲ್ಕತ್ತದನಂತರ ಅತ್ಯಂತ ನಿಧಾನಗತಿಯ ಸಂಚಾರ ವ್ಯವಸ್ಥೆಯ ನಗರ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಬಿಬಿಎಂಪಿಯ ಸಂಚಾರ ಎಂಜಿನಿಯರಿಂಗ್‌ ವಿಭಾಗ ನೀಡುವ ಮಾಹಿತಿಯ ಪ್ರಕಾರ, ನಗರ ವ್ಯಾಪ್ತಿಯ 8 ವಲಯಗಳಲ್ಲಿ 1,400 ಕಿಲೋಮೀಟರ್‌ಗಳಷ್ಟು ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿವೆ. ಇದರಲ್ಲಿ ಅರ್ಧದಷ್ಟು ದ್ವಿಪಥದ ರಸ್ತೆಗಳು. ಎರಡೂ ಪಥಗಳಲ್ಲೂ ಸಂಚಾರ ದಟ್ಟಣೆ ಇದೆ. ಉದಾಹರಣೆಗೆ ಸಿಲ್ಕ್‌ಬೋರ್ಡ್‌, ಕೆ.ಆರ್‌.ಪುರ ಜಂಕ್ಷನ್‌ ಪ್ರದೇಶಗಳಲ್ಲಿ ಏಕಮುಖ ಸಂಚಾರ ಇದ್ದರೂ ಓಡಾಟ ಕಷ್ಟ’ ಎಂದು ಅಧಿಕಾರಿಗಳೇ ಹೇಳುತ್ತಾರೆ.

‘2007ರಲ್ಲಿ ನಗರದ ಪ್ರತಿ ಗಂಟೆಗೆ ಸುಮಾರು 3,600 ಕಾರುಗಳು ಸಂಚರಿಸುತ್ತಿದ್ದವು. ಈಗ 10 ಸಾವಿರ ಕಾರುಗಳು ಸಂಚರಿಸುತ್ತಿವೆ’ ಎಂದು ಸಂಚಾರ ಎಂಜಿನಿಯರಿಂಗ್ ಘಟಕ ಮಾಹಿತಿ ನೀಡಿದೆ. ‘ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಅವಕಾಶವಿಲ್ಲ. ಏಕೆಂದರೆ ಭೂಸ್ವಾಧೀನ ದುಬಾರಿಯಾಗಿದೆ. ಎತ್ತರಿಸಲ್ಪಟ್ಟ ರಸ್ತೆಗಳು ಸ್ವಲ್ಪಮಟ್ಟಿಗೆ ಪರಿಹಾರ ಒದಗಿಸಬಹುದೇನೋ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸಂಚಾರ ವ್ಯವಸ್ಥೆ ಎಂಜಿನಿಯರಿಂಗ್‌ ಘಟಕದ ಪ್ರಾಧ್ಯಾಪಕ ಆಶಿಶ್‌ವರ್ಮಾ ಅವರು ತಮ್ಮ ಅಧ್ಯಯನದಲ್ಲಿ, ‘ಈಗಿನ ರಸ್ತೆ ನಿರ್ಮಾಣದಲ್ಲಿ ವಾಹನ ದಟ್ಟಣೆಯ ಬೆಳವಣಿಗೆಯ ಪ್ರಮಾಣದ ಅಂದಾಜು ತಪ್ಪಾಗಿದೆ. ವಾಹನ ಸಂಖ್ಯೆ ಏರಿಕೆಯನ್ನು ಮಧ್ಯಮ ಪ್ರಮಾಣದಲ್ಲಿ ಶೇ 6.67 ಎಂದು ಅಂದಾಜಿಸಲಾಗಿದೆ. ಆದರೆ ವಾಹನ ದಟ್ಟಣೆ ಆ ಅಂದಾಜನ್ನೂ ಮೀರಿರುತ್ತದೆ. ಈ ಅಂದಾಜಿನ ಮೇಲೆ ₹ 15,825 ಕೋಟಿ ವೆಚ್ಚದಲ್ಲಿ ಎತ್ತರಿಸಲ್ಪಟ್ಟ ಕಾರಿಡಾರ್‌ ನಿರ್ಮಿಸಿದರೆ 2025ರ ವೇಳೆಗೆ ಅದು ನಿರರ್ಥಕವಾಗಲಿದೆ’ ಎಂದು ಹೇಳಿದ್ದಾರೆ.

ಬಿಬಿಎಂಪಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು, ‘ಬೆಂಗಳೂರಿನಲ್ಲಿ ಇನ್ನು ವಾಹನ ಹೊಂದುವುದು ದುಬಾರಿಯಾಗಿ ಪರಿಣಮಿಸಲಿದೆ. ಬಳಕೆಯೂ ಸುಲಭವಲ್ಲ. ಹೆಚ್ಚುವರಿ ತೆರಿಗೆ, ಸೆಸ್‌ ಮತ್ತು ಪಾರ್ಕಿಂಗ್‌ ಶುಲ್ಕವನ್ನು ಏರಿಸಬೇಕಾಗುತ್ತದೆ’ ಎಂದು ಹೇಳುತ್ತಾರೆ.

ಸಂಚಾರ ಸಮಸ್ಯೆ: ಡಿ.1ರಂದು ಸಂವಾದ

ನಗರದ ಸಂಚಾರ ದಟ್ಟಣೆ ಕುರಿತಂತೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಹೋಟೆಲ್‌ ದಿ ಛಾನ್ಸರಿ ಪೆವಿಲಿಯನ್‌ನಲ್ಲಿ ಡಿ.1ರಂದು ಸಮಯ: ಸಂಜೆ 5ರಿಂದ 6.30 ಸಂವಾದ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.