ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನ ಸಿಎಲ್–4 ಪರವಾನಗಿಗೆ ಅನುಮೋದನೆ ನೀಡುವಲ್ಲಿ ಅನಗತ್ಯ ವಿಳಂಬ ಮಾಡಿದ್ದ ಅಬಕಾರಿ ಇಲಾಖೆಯ ಐವರು ಅಧಿಕಾರಿಗಳನ್ನು ಆರ್ಥಿಕ ಇಲಾಖೆ ಅಮಾನತು ಮಾಡಿದೆ.
ಬೆಂಗಳೂರು ಟರ್ಫ್ ಕ್ಲಬ್, ಕ್ಲಬ್‌ನ ವಿನ್ಯಾಸ ಮತ್ತು ಸವಲತ್ತುಗಳಲ್ಲಿ ಮಾರ್ಪಾಡು ಮಾಡಿ ನೀಲನಕ್ಷೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಸಂಬಂಧಿತ ಅಧಿಕಾರಿಗಳು ಸಕಾರಣವನ್ನು ನೀಡದೆ ಅನುಮೋದನೆಯನ್ನು ತಡೆ ಹಿಡಿದಿದ್ದರು. ಕಚೇರಿಗೆ ಹಲವು ಬಾರಿ ತೆರಳಿದ್ದರೂ, ಯಾವುದೇ ಪ್ರಗತಿ ಆಗಿರಲಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಈ ಸಂಬಂಧ ಅಬಕಾರಿ ಇಲಾಖೆಯ ಆಯುಕ್ತರಿಗೆ ದೂರು ನೀಡಲಾಗಿತ್ತು. ಇಲಾಖೆಯು ನಡೆಸಿದ ಆಂತರಿಕ ತನಿಖೆಯಲ್ಲಿ, ಈ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ ಎಂಬುದು ಗೊತ್ತಾಗಿತ್ತು. ಅವರನ್ನು ಅಮಾನತು ಮಾಡುವಂತೆ ಆಯುಕ್ತರು, ಆರ್ಥಿಕ ಇಲಾಖೆಗೆ ವರದಿ ಸಲ್ಲಿಸಿದ್ದರು. ಅದರಂತೆ ಬುಧವಾರ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ನಗರ ಉಪವಿಭಾಗ–4ರ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಅಬಕಾರಿ ಸೂಪರಿಂಟೆಂಡೆಂಟ್ ಸೈಯದ್ ಶಹಾಬುದ್ದೀನ್ ಬೊಕಾರಿ, ಬೆಂಗಳೂರು ಉಪವಿಭಾಗ–7ರ ಡೆಪ್ಯುಟಿ ಸೂಪರಿಂಟೆಂಡೆಂಟ್ ಅಬೂಬಕರ್ ಮುಜಾವರ್, ಸಂಪಂಗಿರಾಮನಗರ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ಎಲ್.ಮಧುಸೂದನ್ ಮತ್ತು ಉಪ ಆಯಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಸಿ.ಶೀತಲ್ ಅವರನ್ನು ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.