ADVERTISEMENT

ಬೆಂಗಳೂರು ವಿ.ವಿ: ಈ ಬಾರಿ ಗೌರವ ಡಾಕ್ಟರೇಟ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 19:13 IST
Last Updated 7 ಅಕ್ಟೋಬರ್ 2020, 19:13 IST

ಬೆಂಗಳೂರು: ಆಯ್ಕೆ ಪ್ರಕ್ರಿಯೆ ನಡೆಸಲು ಸಮಯಾವಕಾಶ ಇಲ್ಲದೇ ಇರುವುದರಿಂದ ಈ ಬಾರಿಯ ಘಟಿಕೋತ್ಸವದ ಸಂದರ್ಭದಲ್ಲಿ ಗೌರವ ಡಾಕ್ಟರೇಟ್‌ ನೀಡದಿರಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಏಪ್ರಿಲ್‌ ತಿಂಗಳಲ್ಲಿ ನಡೆಯುವ ಘಟಿಕೋತ್ಸವ, ಕೋವಿಡ್‌ ಕಾರಣದಿಂದ ಈ ಬಾರಿ ವಿಳಂಬವಾಗಿದೆ. ಅಲ್ಲದೆ, ಇದೀಗ ವರ್ಚುಲ್‌ ಘಟಿಕೋತ್ಸವ ನಡೆ
ಸಲು ತಯಾರಿ ನಡೆದಿದ್ದು, ಕಾರ್ಯಕ್ರಮಕ್ಕೆ ಯಾರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕೆಂಬ ಚರ್ಚೆ ನಡೆದಿದೆ.

‘ಗೌರವ ಡಾಕ್ಟರೇಟ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಹೆಚ್ಚಿನ ಸಮಯಾವಕಾಶ ಬೇಕಾಗಿದೆ. ಹೀಗಾಗಿ, ಈ ವರ್ಷ ಗೌರವ ಡಾಕ್ಟರೇಟ್‌ ನೀಡದಿರಲು ನಿರ್ಧರಿಸಲಾಗಿದೆ. ಚಿನ್ನದ ಪದಕ ಪಡೆದವರನ್ನು ಮಾತ್ರ ವ್ಯಕ್ತಿಗತ ಅಂತರ ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಘಟಿಕೋತ್ಸವ ಸಮಾರಂಭದಲ್ಲಿ ನೇರವಾಗಿ ಭಾಗವಹಿಸಲು ಆಹ್ವಾನಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ADVERTISEMENT

‘ಗೌರವ ಡಾಕ್ಟರೇಟ್‌ ಗಣ್ಯರನ್ನು ಆಯ್ಕೆ ಮಾಡಲು ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸಮಿತಿ ರಚಿಸಬೇಕಾಗಿದೆ. ಬಳಿಕ ಅರ್ಹರಿಂದ ಅರ್ಜಿ ಆಹ್ವಾನಿಸಬೇಕು. ಅರ್ಜಿಗಳ ಪರಿಶೀಲನೆ ಬಳಿಕ, ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ, ಅವರು ಪಟ್ಟಿ ಅಂತಿಮಗೊಳಿಸುತ್ತಾರೆ’ ಎಂದೂ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಹೇಳಿದರು. ಪ್ರತಿವರ್ಷ ಕನಿಷ್ಠ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್‌ ನೀಡಲು ವಿ.ವಿಗೆ ಅವಕಾಶವಿದೆ. ಎರಡು ವರ್ಷಗಳ ಹಿಂದೆ ಕೊನೆಕ್ಷಣದಲ್ಲಿ ಪಟ್ಟಿ ಕಳುಹಿಸಿದ ಕಾರಣ ರಾಜ್ಯಪಾಲರು ಯಾವುದೇ ಹೆಸರಿಗೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ, ಆ ವರ್ಷ ಕೂಡಾ ಗೌರವ ಡಾಕ್ಟರೇಟ್‌ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.