
ಬೆಂಗಳೂರು: ಇದೇ ಅಕ್ಟೋಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಮ್ಯಾರಥಾನ್‌ನ ಟೈಟಲ್ ಪ್ರಾಯೋಜಕತ್ವವನ್ನು ವಿಪ್ರೋ ಲಿಮಿಟೆಡ್ ಸಂಸ್ಥೆಯು ವಹಿಸಲಿದೆ.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮ್ಯಾರಥಾನ್ ಆಯೋಜಕರಾದ ಎನ್‌ಇಬಿ ಸ್ಪೋರ್ಟ್ಸ್ ಜೊತೆಗೆ ವಿಪ್ರೋ ಒಪ್ಪಂದ ಮಾಡಿಕೊಂಡಿತು. ಇದೇ ಸಂದರ್ಭದಲ್ಲಿ ಶೀರ್ಷಿಕೆಯನ್ನೂ ಅನಾವರಣಗೊಳಿಸಲಾಯಿತು.
ಹತ್ತನೇ ಆವೃತ್ತಿಯ ಬೆಂಗಳೂರು ಮ್ಯಾರಥಾನ್ ಅಕ್ಟೋಬರ್ 8ರಂದು ನಡೆಯಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಓಟವು ನಡೆಯಲಿದೆ. ಮ್ಯಾರಥಾನ್ (42.195 ಕಿ.ಮೀ), ಹಾಫ್ ಮ್ಯಾರಥಾನ್ (21.1 ಕಿ.ಮೀ) ಹಾಗೂ 5 ಕಿ.ಮೀ ಓಟದ ಸ್ಪರ್ಧೆಗಳು ನಡೆಯಲಿವೆ. ದೇಶ, ವಿದೇಶಗಳಿಂದ 20 ಸಾವಿರಕ್ಕೂ ಹೆಚ್ಚು ಓಟಗಾರರು ಸ್ಪರ್ಧಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮ್ಯಾರಥಾನ್ ಪ್ರಚಾರ ರಾಯಭಾರಿಯಾಗಿರುವ ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್ ರೀತ್ ಅಬ್ರಾಹಂ, ‘ಆರೋಗ್ಯ ರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಒಬ್ಬ ಕ್ರೀಡಾಪಟುವಾಗಿ ನನಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವ ಅರಿತಿರುವೆ. ಆರೋಗ್ಯವೇ ಭಾಗ್ಯ ಎನ್ನುವುದು ಸಾರ್ವಕಾಲೀಕ. ಈ ಮ್ಯಾರಥಾನ್ ಕೇವಲ ಕ್ರೀಡೆಯಾಗಿ ಅಲ್ಲ, ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿಯನ್ನೂ ಮಾಡಲಿದೆ‘ ಎಂದರು.
ರೇಸ್ ನಿರ್ದೇಶಕ ನಾಗರಾಜ್ ಅಡಿಗಾ, ವಿಪ್ರೋ ಸಂಸ್ಥೆ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್ ಹಾಗೂ ಐಎಎಸ್ ಅಧಿಕಾರಿ ರಾಜೇಂದ್ರ ಕಠಾರಿಯಾ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.