ADVERTISEMENT

ಅಕ್ರಮವಾಗಿ ನುಸುಳಿ ‘ಓಲಾ‘ ಚಾಲನೆ: ಬಾಂಗ್ಲಾ ಪ್ರಜೆ ಬಂಧನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 16:24 IST
Last Updated 19 ಏಪ್ರಿಲ್ 2022, 16:24 IST

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ಪ್ರಜೆ ಸುಮೊನ್ ಅಲ್ಮಮೂನ್ ಮೊಹಮ್ಮದ್‌ನನ್ನು (27) ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

‘ದೇಶದೊಳಗೆ ಅಕ್ರಮವಾಗಿ ನುಸುಳಿ ವಾಸವಿದ್ದ ಸುಮೊನ್, ಭಾರತೀಯ ಪಾಸ್‌ಪೋರ್ಟ್ ಬಳಸಿಕೊಂಡು ಇತ್ತೀಚೆಗೆ ದುಬೈಗೆ ಹೊರಟಿದ್ದ. ವಿಮಾನದಲ್ಲಿ ಪ್ರಯಾಣಿಸಲು ನಿಲ್ದಾಣಕ್ಕೆ ಬಂದಿದ್ದಾಗ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸುಮೊನ್‌ನನ್ನು ವಶಕ್ಕೆ ಪಡೆದಿದ್ದ ವಲಸೆ ಅಧಿಕಾರಿಗಳು, ಠಾಣೆಗೆ ತಂದು ಒಪ್ಪಿಸಿದ್ದಾರೆ. ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

‘ಓಲಾ‘ ಚಾಲಕ ಕೆಲಸ: ‘ಸುಮೊನ್‌ನ ತಂದೆ–ತಾಯಿ ಬಾಂಗ್ಲಾದೇಶದಲ್ಲಿ ವಾಸವಿದ್ದಾರೆ. ಬಾಲಕನಾಗಿದ್ದಾಗಲೇ ಬಾಂಗ್ಲಾದೇಶದ ಗಡಿಯಲ್ಲಿ ನುಸುಳಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದ ಸುಮೊನ್, ರಾನಾಘಾಟ್‌ ಪ್ರದೇಶದಲ್ಲಿ ಕೆಲದಿನ ಕಾರ್ಮಿಕನಾಗಿ ಕೆಲಸ ಮಾಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘11 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುಮೊನ್, ಕಲ್ಯಾಣನಗರದ ಮಂಜುನಾಥ್ ನಗರದಲ್ಲಿ ವಾಸವಿದ್ದ. ‘ಓಲಾ’ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡಲಾರಂಭಿಸಿದ್ದ. ಏಜೆಂಟರೊಬ್ಬರ ಮೂಲಕ ನಕಲಿ ಆಧಾರ್, ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ಅವುಗಳನ್ನು ಬಳಸಿಕೊಂಡು ಭಾರತೀಯ ಪಾಸ್‌ಪೋರ್ಟ್‌ ಪಡೆದುಕೊಂಡಿದ್ದ.’

‘ದುಬೈನ ಸಾರಿಗೆ ಸಂಸ್ಥೆಯೊಂದರಲ್ಲಿ ಇತ್ತೀಚೆಗೆ ಸುಮೊನ್‌ಗೆ ಚಾಲಕ ಕೆಲಸ ಸಿಕ್ಕಿತ್ತು. ಪ್ರವಾಸ ವೀಸಾದಡಿ ದುಬೈಗೆ ಹೋಗಲು ಏಪ್ರಿಲ್ 12ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಸಿಕ್ಕಿಬಿದ್ದ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.