ADVERTISEMENT

ಖಾಲಿ ಚೆಕ್ ದುರುಪಯೋಗಪಡಿಸಿಕೊಂಡು ₹ 9 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 3:20 IST
Last Updated 25 ಆಗಸ್ಟ್ 2020, 3:20 IST

‌ಬೆಂಗಳೂರು: ‘ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಪರಿಚಯ ಮಾಡಿಕೊಂಡಿದ್ದ ಮಹೇಶ್‌ಕುಮಾರ್ ಎಂಬಾತ ಸಾಲ ಕೊಡಿಸುವ ನೆಪದಲ್ಲಿ ₹ 9 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ’ ಎಂದು ಆರೋಪಿಸಿ ಉದ್ಯಮಿ ರಾಜಾರಾಮ್ ಚೌಧರಿ ಎಂಬುವರು ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.

‘ಶ್ಯೂರಿಟಿಗಾಗಿ ಪಡೆದಿದ್ದ ಖಾಲಿ ಚೆಕ್‌ ದುರುಪಯೋಗಪಡಿಸಿಕೊಂಡು ವಂಚಿಸಿದ ಆರೋಪದಡಿ ಮಹೇಶ್‌ಕುಮಾರ್ ಎಂಬುವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜಾರಾಮ್ ಅವರು ಸಾರಾಯಿಪಾಳ್ಯದಲ್ಲಿ ಸ್ನೇಹಿತರೊಬ್ಬರ ಜೊತೆಯಲ್ಲಿ ‘ಅಂಬಿಕಾ ಗ್ಲಾಸ್ ಆ್ಯಂಡ್ ಪ್ಲೇವುಡ್‌’ ಪೀಠೋಪಕರಣ ತಯಾರಿಕೆ ಉದ್ಯಮ ನಡೆಸುತ್ತಿದ್ದಾರೆ. ಕಂಪನಿಯ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ಖಾತೆ ಹೊಂದಿದ್ದಾರೆ. ಜುಲೈ 27ರಂದು ರಾಜಾರಾಮ್ ಅವರನ್ನು ಭೇಟಿಯಾಗಿದ್ದ ಮಹೇಶ್ ಕುಮಾರ್, ‘ನಾನು ಐಡಿಎಫ್‌ಸಿ ಬ್ಯಾಂಕ್ ಅಧಿಕಾರಿ. ನಿಮಗೆ ₹ 50 ಲಕ್ಷ ಸಾಲ ಮಂಜೂರು ಮಾಡಿಸಿಕೊಡುತ್ತೇನೆ’ ಎಂದು ಹೇಳಿದ್ದ.’

ADVERTISEMENT

‘ಅಂಗಡಿಯ ಪರವಾನಗಿ, ಜಿಎಸ್‌ಟಿ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆದಿದ್ದ ಆರೋಪಿ, ಶ್ಯೂರಿಟಿಗೆಂದು ಹೇಳಿ ಸಹಿ ಮಾಡಿದ್ದ ಖಾಲಿ ಚೆಕ್‌ ಪಡೆದಿದ್ದ. ಕೆಲ ದಿನಗಳಲ್ಲಿ ಸಾಲ ಮಂಜೂರಾಗುವುದಾಗಿಯೂ ಹೇಳಿದ್ದ’ ಎಂದೂ ಪೊಲೀಸರು ಹೇಳಿದರು.

‘ಇದೇ 3ರಂದು ರಾಜಾರಾಮ್ ಅವರ ಉದ್ಯಮದ ಹೆಸರಿನಲ್ಲಿದ್ದ ಖಾತೆಯಿಂದ ₹ 9 ಲಕ್ಷ ಕಡಿತವಾಗಿದೆ. ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಎರಡು ಚೆಕ್‌ಗಳಿಂದ ಹಣ ಡ್ರಾ ಮಾಡಿಕೊಂಡಿದ್ದು ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.