ADVERTISEMENT

ಠಾಣೆ ಗೋಡೆಗೆ ಬ್ಯಾನರ್: ಶಾಲೆ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 4:27 IST
Last Updated 13 ಫೆಬ್ರುವರಿ 2023, 4:27 IST
   

ಬೆಂಗಳೂರು: ಬಸವೇಶ್ವರನಗರ ‍ಪೊಲೀಸ್ ಠಾಣೆ ಕಟ್ಟಡದ ಗೋಡೆಗೆ ಬ್ಯಾನರ್ ಕಟ್ಟಿದ್ದ ಆರೋಪದಡಿ ಸರ್ವೋದಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ದಾಸರಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಠಾಣೆ ಕಟ್ಟಡದ ಗೋಡೆಗೆ ಶಾಲಾ ಪ್ರವೇಶಾತಿ ಜಾಹೀರಾತಿನ ಬ್ಯಾನರ್‌ ಕಟ್ಟಲಾಗಿತ್ತು. ಗಸ್ತಿನಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್, ಬ್ಯಾನರ್ ಗಮನಿಸಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಸಾರ್ವಜನಿಕ ಆಸ್ತಿಯನ್ನು ವಿಕಾರಗೊಳಿಸಿದ ಆರೋಪದಡಿ ಶಾಲೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಡಳಿತ ಮಂಡಳಿಗೆ ನೋಟಿಸ್ ನೀಡಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಬೈಕ್ ಉರುಳಿಬಿದ್ದು ಸವಾರ ಸಾವು

ADVERTISEMENT

ಬೆಂಗಳೂರು: ಮಾಗಡಿ ರಸ್ತೆ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಉರುಳಿಬಿದ್ದು, ಸವಾರ ಎಸ್‌.ಕೆ. ಸಂಜಯ್‌ಕುಮಾರ್ (26) ಎಂಬುವರು ಮೃತಪಟ್ಟಿದ್ದಾರೆ.

‘ಸಪ್ತಗಿರಿ ಬಡಾವಣೆ ನಿವಾಸಿ ಸಂಜಯ್‌ ಕುಮಾರ್, ನೃತ್ಯಗಾರ. ಸಂಸ್ಥೆಯೊಂದರಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಸ್ನೇಹಿತರ ಜೊತೆ ಶನಿವಾರ ಪಾರ್ಟಿ ಮಾಡಿದ್ದರು ಎನ್ನಲಾದ ಸಂಜಯ್‌ಕುಮಾರ್, ತಡರಾತ್ರಿ 1.30 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದರು. ಇದೇ ಸಂದರ್ಭದಲ್ಲಿ ಬೈಕ್ ಉರುಳಿಬಿದ್ದಿತ್ತು. ರಸ್ತೆಗೆ ಬಿದ್ದ ಸಂಜಯ್‌ಕುಮಾರ್ ತಲೆಗೆ ತೀವ್ರ ಪೆಟ್ಟಾಗಿತ್ತು’ ಎಂದು ತಿಳಿಸಿದರು.

‘ಸಂಜಯ್, ಹೆಲ್ಮೆಟ್ ಧರಿಸಿರಲಿಲ್ಲ. ಪಾನಮತ್ತ
ರಾಗಿ ಬೈಕ್ ಚಲಾಯಿಸುತ್ತಿದ್ದ ಬಗ್ಗೆ ಅನುಮಾನವಿದೆ. ಅವರ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.